ಅತಿಥಿ ಉಪನ್ಯಾಸಕರನ್ನು ಬೆಂಬಲಿಸಿ ಬೀದಿಗಿಳಿದ ವಿದ್ಯಾರ್ಥಿಗಳು

Students-strike.
Published on

ಹಳಿಯಾಳ: ಅತಿಥಿ ಉಪನ್ಯಾಸಕರ  ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸಿ ಮೊದಲಿನಂತೆ ಅವರು ಮತ್ತೇ ತರಗತಿಗಳಿಗೆ ಹಾಜರಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಳಿಯಾಳದ ಹವಗಿಯ ಸರ್ಕಾರಿ ಪದವಿ ಕಾಲೇಜ್ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟಿಸಿದರು.

ಕಳೆದ 26 ದಿನಗಳಿಂದ ಅತಿಥಿ ಉಪನ್ಯಾಸಕರನ್ನು  ಖಾಯಂಗೊಳಿಸಲು ಒತ್ತಾಯಿಸಿ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯನ್ನು ನಡೆಸುತ್ತಿರುವುದರಿಂದ,  ತಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು, ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸಿ ತಮ್ಮ ತರಗತಿಗಳು ನಡೆಯಲು ಅನುಕೂಲ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಬಿದಿಗಿಳಿದು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ಹವಗಿಯ ತಮ್ಮ ಕಾಲೇಜ್ ಎದುರಿನಲ್ಲಿಯ ಖಾನಾಪುರ-ತಾಳಗುಪ್ಪಾ ರಾಜ್ಯ ಹೆದ್ದಾರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ರಸ್ತೆಗೆ ಇಳಿದು ಹೆದ್ದಾರಿ ತಡೆದು ತಮ್ಮ ಶಿಕ್ಷಣಕ್ಕೆ ಆಗುತ್ತಿರುವ ಸಮಸ್ಯೆಯನ್ನು ತೊಡಿಕೊಂಡರು. ಪ್ರತಿಭಟನೆಯನ್ನು ಉದ್ದೇಶಿಸಿ ವಿದ್ಯಾರ್ಥಿ ಪ್ರತಿನಿಧಿ ವಿಠ್ಠಲ ಹುಂಬೆ ಮಾತನಾಡಿ, ಸರ್ಕಾರಿ ಪದವಿ ಕಾಲೇಜ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರೇ ಇದ್ದು, ಇವರು ನವೆಂಬರ್ 23 ರಿಂದ ತರಗತಿ ಬಹಿಷ್ಕರಿಸಿ ಮುಷ್ಕರದಲ್ಲಿ ತೊಡಗಿದ್ದರಿಂದ ಕಾಲೇಜುಗಳಲ್ಲಿ ತರಗತಿ ನಡೆಯದೇ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಇದರಿಂದ ನೇರವಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ‌ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ನಾಗರಾಜ ಗಳಗಿ ಮಾತನಾಡಿ  ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ನಮ್ಮ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬಿರುವ ಲಕ್ಷಣಗಳು ಕಾಣಿಸುತ್ತಿವೆ. ಒಂದು ತಿಂಗಳು ಸಮೀಪಿಸುತ್ತಿದ್ದು ತರಗತಿಗಳು ನಡೆಯುತ್ತಿಲ್ಲ ಹೀಗಾಗಿ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್.ಎಚ್. ಬಾಗವಾನ ಅವರಿಗೆ ವಿದ್ಯಾರ್ಥಿಗಳು  ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಅವರು ವಿದ್ಯಾರ್ಥಿಗಳ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮನವಿ ಪತ್ರವನ್ನು ಸರ್ಕಾರಕ್ಕೆ ರವಾನಿಸಲಾಗುವುದು, ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆ‌ ಮಾಡದಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿದ್ಯಾರ್ಥಿ ಪ್ರತಿನಿಧಿ ಕೋಮಲ್ ಗೌಡ,  ನಾಗರಾಜ್ ಮೇತ್ರಿ, ಸುದೀಪ್ ಬೋಸ್ಲೆ,  ಶಶಿಧರ ದೇಸಾಯಿ, ನಾರಾಯಣ ಕಾನೋಜಿ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net