

ಹಾಸನ: ವಿದ್ಯಾರ್ಥಿಗಳು ತರಗತಿಗಳಿಗೆ ಮಾತ್ರ ಸೀಮಿತವಾಗದೆ, ಸ್ವತಃ ತಮ್ಮನ್ನು ಅಭಿವೃದ್ಧಿಪಡಿಸಿಕೊಂಡು ನಿಜವಾದ ಇಂಜಿನಿಯರ್ ಆಗಬೇಕು ಎಂದು ಥೈಲ್ಯಾಂಡ್‌ನ ಉತ್ತರ ಬ್ಯಾಂಕಾಕ್‌ನ ಕಿಂಗ್ ಮೊಂಗ್‌ಕುಟ್ ತಾಂತ್ರಿಕ ವಿಶ್ವವಿದ್ಯಾಲಯದ ಮುಖ್ಯ ವಿಜ್ಞಾನಿ ಡಾ. ಸಂಜಯ್ ಒ.ಖ ಹೇಳಿದರು.
ಹಾಸನ ತಾಲೂಕಿನ ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ಭಾರತ ಹಾಗೂ ವಿದೇಶಗಳಲ್ಲಿ ಇರುವ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಉದ್ಯೋಗಾವಕಾಶಗಳ ಕುರಿತು ವಿವರಿಸಿದರು.
ವ್ಯಂಗ್ಯ ಚಿತ್ರ ಕಲಾವಿದ ಶಿವರಾಮ್ ಮಾತನಾಡಿ, ವ್ಯಂಗ್ಯಚಿತ್ರ (ಕಾರ್ಟೂನ್) ರಚನೆ ಕುರಿತು ತಮ್ಮ ಕಾರ್ಟೂನ್ ಕಲಾಕೃತಿಗಳನ್ನು ಪ್ರದರ್ಶಿಸಿ, ಜೀವನದಲ್ಲಿ ತೃಪ್ತಿ ಪಡೆಯಲು ಕಲೆ ಅತ್ಯಂತ ಮುಖ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಟಿ.ರಂಗಸ್ವಾಮಿ ಮಾತನಾಡಿ, ಇಂಜಿನಿಯರಿಂಗ್ ಶಿಕ್ಷಣವು ಕೇವಲ ಪದವಿಗೆ ಸೀಮಿತವಾಗದೆ, ವ್ಯಕ್ತಿತ್ವ, ನೈಪುಣ್ಯ ಮತ್ತು ಸೃಜನಾತ್ಮಕತೆಯ ಅಭಿವೃದ್ಧಿಗೆ ದಾರಿ ತೋರಬೇಕು ಎಂದರು.
ಕಾರ್ಯಕ್ರಮದಲ್ಲಿ ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಇದ್ದರು.