

ಪಿರಿಯಾಪಟ್ಟಣ: ಶಿಕ್ಷಣದ ವಿಷಯದಲ್ಲಿ ವಿದ್ಯಾರ್ಥಿಗಳು ಮೈಮರೆಯಬಾರದು ಎಂದು ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯ ಅಧ್ಯಕ್ಷ ಜೆ.ಎಸ್.ನಾಗರಾಜ್ ತಿಳಿಸಿದರು.
ತಾಲೂಕಿನ ಹುಣಸವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2024-25ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣವಿಲ್ಲದಿದ್ದಲ್ಲಿ ಯಾವುದೇ ಉದ್ಯೋಗವನ್ನು ಪಡೆಯಲು ಸಾಧ್ಯವಿಲ್ಲ, ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಷ್ಟೇ ಕಲಿತರೂ ಸಾಲದು ಎಂದರು. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನ ಅತ್ಯಂತ ಮಹತ್ವದ್ದಾಗಿದ್ದು ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಮೊಬೈಲ್ ಗೀಳನ್ನು ಹೆಚ್ಚಾಗಿ ಹಚ್ಚಿಕೊಳ್ಳಬಾರದೆಂದು ಕಿವಿಮಾತು ಹೇಳಿದರು.
ಹದಿಹರೆಯದ ಮಕ್ಕಳಿಗೆ ಕಾನೂನಿನ ಸಾಮಾನ್ಯ ಅರಿವು ಇರಬೇಕಿದ್ದು, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಯಾವುದೇ ವಾಹನಗಳನ್ನು ಚಲಾಯಿಸುವುದು ಅಪರಾಧವಾಗಿದೆ ಎಂದರು. ಡಿಎಲ್ ಇಲ್ಲದೆ ವಾಹನ ಚಲಾಯಿಸುವಾಗ ಎದುರಾಗುವ ಅಪಘಾತ ಮತ್ತಿತರ ಸಮಸ್ಯೆಗಳಿಂದ ಲಕ್ಷಾಂತರ ರೂಪಾಯಿಗಳ ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸುವ ಸಂಭವ ಇರುತ್ತದೆ ಎಂದು ಎಚ್ಚರಿಸಿದರು.
18 ವರ್ಷ ತುಂಬಿದ ಮಕ್ಕಳು ಕಡ್ಡಾಯವಾಗಿ ಡಿಎಲ್ ಪಡೆದು, ವಿಮೆ ಇರುವ ವಾಹನಗಳನ್ನು ಮಾತ್ರ ಚಾಲನೆ ಮಾಡಬೇಕಿದೆ ಎಂದರು. ರೋಟರಿ ಐಕಾನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ವಿವೇಕ ಮತ್ತು ಸಂಸ್ಕಾರವನ್ನು ಕಡ್ಡಾಯವಾಗಿ ಕಲಿಯಬೇಕಿದೆ ಎಂದರು. ಪರಿಶ್ರಮದಿಂದ ಅಭ್ಯಸಿಸುವ ಮನೋಭಾವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಹೊಂದಬೇಕಿದ್ದು ಉತ್ತಮ ಶಿಕ್ಷಣವಿದ್ದಲ್ಲಿ ಮಾತ್ರ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಹರೀಶ್, ರೋಟರಿ ಐಕಾನ್ಸ್ ಸಂಸ್ಥೆಯ ಸಿ.ಎನ್.ವಿಜಯ್, ಗಣಿತ ಶಿಕ್ಷಕ ಪರಮಶಿವಯ್ಯ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಶಾಲಾ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಶಿಕ್ಷಕಿ ಚಂದ್ರಕಲಾ ಮಾಹಿತಿ ನೀಡಿದರು.
ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿದವು.
ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ನಂಜೇಗೌಡ, ಸದಸ್ಯ ಸ್ವಾಮಿ, ಮಹಾಲಕ್ಷ್ಮೀ, ಶಿಕ್ಷಕ ರಾಘವೇಂದ್ರ, ಜಗದೀಶ್, ಕೆ.ವಿ.ಶಿಲ್ಪಾ, ನವ್ಯಾ ಇತರರು ಇದ್ದರು.