ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನ ಇರಲಿ

ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನ ಇರಲಿ
Published on

ಅರಕಲಗೂಡು: ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲಿಯೇ ವ್ಯವಹಾರಿಕ ಜ್ಞಾನವನ್ನು ಗಳಿಸಬೇಕು. ಈ ನಿಟ್ಟಿನಲ್ಲಿ ಕಾಲೇಜು ಮಟ್ಟದಲ್ಲಿ ಆಹಾರ ಮೇಳ ಆಯೋಜಿಸಲಾಗಿದೆ ಎಂದು ಟೈಮ್ಸ್ ಹಾಸನ ಪಿಯು ಕಾಲೇಜಿನ ಪ್ರಾಂಶುಪಾಲ ನವೀನ್ ಪಿ.ಉಲಿವಾಲ ಹೇಳಿದರು.

ಪಟ್ಟಣದ ಟೈಮ್ಸ್ ಹಾಸನ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಫುಡ್‌ಫೆಸ್ಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿತ್ಯವೂ ನಡೆಯುವ ವ್ಯವಹಾರವನ್ನು ಅವಲೋಕನ ಮಾಡಿದರೆ, ಆಹಾರ ಉತ್ಪಾದನೆ, ಬಳಕೆ ಕುರಿತು ಅರಿವನ್ನು ಹೊಂದಬಹುದಾಗಿದೆ. ಅನ್ನದಾತನ ಶ್ರಮದ ಅರಿವು ಮುಖ್ಯ. ಹೀಗಾಗಿ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಅರಿವು ಇರಬೇಕೆಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಚನಾ ವಿದ್ಯಾಲಯದ ಮುಖ್ಯ ಶಿಕ್ಷಕ ವಿಜಯ್‌ಕುಮಾರ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಮನಸ್ಸು ಗೊಂದಲಮಯವಾಗುತ್ತಿದೆ. ಒತ್ತಡದಿಂದ ಹೊರಬರಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಪ್ರತಿ ವಿದ್ಯಾರ್ಥಿಗಳು ಬಗೆ ಬಗೆಯ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಮಾರಾಟ ಮಾಡುವ ಮೂಲಕ ವ್ಯವಹಾರ ಜ್ಞಾನ, ಸಿದ್ಧಪಡಿಸುವಿಕೆ ಮತ್ತು ಆಹಾರ ಪದಾರ್ಥಗಳ ಬೆಲೆಗಳನ್ನು ಮನಗಂಡಿದ್ದಾರೆ. ಈ ನಿಟ್ಟಿನಲ್ಲಿ ದೇಶದಲ್ಲಿ ಆಗುತ್ತಿರುವ ಬೆಲೆ ಏರಿಕೆ, ಆಹಾರ ಬಳಕೆಯ ಬಗ್ಗೆಯೂ ಸ್ವಲ್ಪಮಟ್ಟಿನ ತಿಳಿವಳಿಕೆ ಹೊಂದಬೇಕಿದೆ. ನಿತ್ಯವೂ ಸೇವನೆ ಮಾಡುವ ಯಾವುದೇ ಆಹಾರ ಪದಾರ್ಥಗಳನ್ನು ವ್ಯಯ ಮಾಡಬಾರದು ಎಂದು ಹೇಳಿದರು.

ಕಾಲೇಜಿನ ಉಪನ್ಯಾಸಕ ಕೃಷ್ಣಮೂರ್ತಿ ಮಾತನಾಡಿ, ನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿದೆ. ಇದು ನಮ್ಮ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ವಿದ್ಯೆ ಕಲಿಯುವ ಸಂದರ್ಭದಲ್ಲಿ ಆಹಾರ ಮೇಳ ಆಯೋಜನೆ ಮಾಡಿರುವುದು ಅವರಲ್ಲಿ ವ್ಯವಹಾರಿಕ ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗಿದೆ ಎಂದರು.

ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಭಾಗವಹಿಸಿ ಬಗೆ ಬಗೆಯ ಖಾದ್ಯಗಳನ್ನು ಸಿದ್ದಪಡಿಸಿ 15 ಸ್ಟಾಲ್‌ಗಳಲ್ಲಿ ಮಾರಾಟಕ್ಕೆ ಇಟ್ಟು 66 ಸಾವಿರ ರೂ ವಹಿವಾಟು ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net