

ಶನಿವಾರಸಂತೆ: ಗಣೇಶ ಚತುರ್ಥಿ ಪ್ರಯುಕ್ತ ಸಮಿಪದ ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳು ಪರಿಸರಸ್ನೇಹಿ ಗಣಪತಿ ತಯಾರಿಸಿ ಸಂಭ್ರಮಿಸಿದರು.
ಶಾಲೆಯ ನಿಸರ್ಗ ಇಕೋ ಕ್ಲಬ್‌ನಿಂದ ನೋಡಲ್ ಶಿಕ್ಷಕ ಡಿ.ಎಸ್.ಮಧುಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮಾಲಿನ್ಯರಹಿತ, ಪಿಒಪಿಮುಕ್ತ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಸಿದರು. ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿವಿಧ ಪ್ರಕಾರಗಳ ಪರಿಸರಸ್ನೇಹಿ ಗಣಪತಿ ಮೂರ್ತಿಯನ್ನು ಅಲಂಕರಿಸಿ ಖುಷಿ ಪಟ್ಟರು. ನೋಡಲ್ ಶಿಕ್ಷಕ ಮಧುಕುಮಾರ್ ಪರಿಸರಸ್ನೇಹಿ ಗಣಪತಿಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಪರಿಸರ ಮಹತ್ವದ ಬಗ್ಗೆಯೂ ಜಾಗೃತಿ ಮೂಡಿಸಿದರು.
ಶಾಲಾ ಮುಖ್ಯಶಿಕ್ಷಕಿ ಎಂ.ಸಿ.ನಳಿನಿ, ಹಿರಿಯ ಶಿಕ್ಷಕ ಮಾರುತಿ ಅರೇರ್, ಎಂ.ವಿ.ರೂಪಾ, ಮಹಾದೇವಿ, ಪ್ರಿಯಾಂಕಾ ಚಿಪಳೂಣಕರ್, ಗೀತಾ, ಡಿ.ಸಿ.ಕುಶಾಲಪ್ಪ ಇದ್ದರು.