ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಿ

16arsph2ep
Published on

ಅರಸೀಕೆರೆ: ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು ತೆರೆದುಕೊಳ್ಳಬೇಕು ಎಂದು ಯಳನಡು ಸಂಸ್ಥಾನದ ಜ್ಞಾನಪ್ರಭು ಶ್ರೀ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.


ಜ್ಞಾನಶ್ರೀ ಎಕ್ಸ್‌ಪರ್ಟ್ ಪಿಯು ಕಾಲೇಜು ವತಿಯಿಂದ ಕಲಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಶಿಕ್ಷಣ ವಿದ್ಯಾರ್ಥಿಯ ಬಾಳು ಬೆಳಗುವ ಸಾಧನವಾಗಬೇಕು. ವಿದ್ಯೆ ಕಲಿಸಿದ ಗುರು, ಪಾಲಕರನ್ನು ಗೌರವದಿಂದ ಕಾಣುವ ಸಂಸ್ಕಾರ ಬೆಳೆಸಿಕೊಂಡಾಗ ಮಾತ್ರ ವಿದ್ಯೆಗೆ ಬೆಲೆ ಬರಲಿದೆ ಎನ್ನುವುದನ್ನು ಮರೆಯಬಾರದು. ಜ್ಞಾನ, ವಿಜ್ಞಾನ ಯುಗದ ಸವಾಲುಗಳಿಗೆ ತೆರೆದುಕೊಳ್ಳುವ ಜತೆಗೆ ಉನ್ನತ ಶಿಕ್ಷಣ ಪಡೆಯುವ ಮೂಲಕ ಸ್ಪರ್ಧಾತ್ಮಕ ಜಗತ್ತಿಗೆ ಎಲ್ಲರೂ ತೆರೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಜ್ಞಾನಶ್ರೀ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಆಡಳಿತಾಧಿಕಾರಿ ಅರುಣ್‌ಕುಮಾರ್ ಮಾತನಾಡಿ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಪ್ರಸಕ್ತ ವರ್ಷ ಕಾಲೇಜಿಗೆ ಶೇ.100 ಫಲಿತಾಂಶ ಬಂದಿರುವುದು ಹೆಮ್ಮೆಯ ಸಂಗತಿ. ಕಾಲೇಜಿನ ಉಪನ್ಯಾಸಕರು, ಪಾಲಕರು ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ಹೇಳಿದರು.


ವಿವೇಕಾನಂದ ಬಿ.ಇಡಿ ಕಾಲೇಜು ಪ್ರಾಂಶುಪಾಲ ಮಲ್ಲಿಕಾರ್ಜುನ ಕುಡುವಕ್ಕಲಗಿ, ನಿವೃತ್ತ ಪ್ರಾಂಶುಪಾಲ ಸಿ.ಎಂ.ಕಪನೇಗೌಡ, ಯಳನಡು ಜಗದ್ಗುರು ವಿದ್ಯಾಸಂಸ್ಥೆಯ ನಿರ್ದೇಶಕ ಸಿದ್ದಯ್ಯ, ಗ್ರಾಪಂ ಸದಸ್ಯರಾದ ಜಯಣ್ಣ, ನವೀನ್, ಚರಣ್, ಉಪನ್ಯಾಸಕಿ ಸುಧಾ, ರೋಟರಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ನಾರಾಯಣರಾವ್ ಶರ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net