

ಚಾಮರಾಜನಗರ/ದಾವಣಗೆರೆ: ಫಿಲಿಪ್ಪೀನ್ಸ್ನಲ್ಲಿರುವ ಕರ್ನಾಟಕದ 12 ವೈದ್ಯಕೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಬರಲು ಸಾಧ್ಯವಾಗದೇ ಪರದಾಡುವಂತಾಗಿದೆ. ಮೆಡಿಸಿನ್ ತರಬೇತಿಗಾಗಿ 3 ತಿಂಗಳ ಹಿಂದೆ ಫಿಲಿಪ್ಪೀನ್ಸ್ಗೆ ತೆರಳಿದ್ದ ಕೊಳ್ಳೇಗಾಲದ ರಶ್ಮಿ, ಬೆಂಗಳೂರಿನ ಸಹನಾ, ಹರಿಹರ ತಾಲೂಕು ನಿಟ್ಟೂರು ಗ್ರಾಮದ ಪ್ರತೀಕ್ ಆರ್. ಬಿದರಿ ಮತ್ತಿತರರು ಈಗ ಸ್ವದೇಶಕ್ಕೆ ಮರಳಲು ಸಾಧ್ಯವಾಗದೆ ಜಾಲತಾಣದ ಮೂಲಕ ಅಳಲನ್ನು ತೋಡಿಕೊಂಡಿದ್ದಾರೆ.
ಫಿಲಿಪ್ಪೀನ್ಸ್ನಲ್ಲಿ 180ಕ್ಕೂ ಅಧಿಕ ಕರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಮನೆಗಳಿಂದ ಯಾರೂ ಹೊರಗೆ ಬಾರದಂತೆ ಅಲ್ಲಿನ ಸರ್ಕಾರ ವಿಪತ್ತು ಘೋಷಣೆ ಹೊರಡಿಸಿದೆ. ಇದು 6 ತಿಂಗಳವರೆವಿಗೂ ಮುಂದುವರಿಯಬಹುದು ಎಂದು ತಿಳಿಸಿದೆ. ಇಲ್ಲಿನ ಸರ್ಕಾರ ವಿದೇಶಿಗರು ತಮ್ಮ ದೇಶಕ್ಕೆ ಹಿಂದಿರುಗುವಂತೆ 72 ಗಂಟೆ ಗಡುವು ನೀಡಿತ್ತು, ನಾವು ನಮ್ಮ ದೇಶಕ್ಕೆ ಬರಲು ಸಿದ್ಧತೆ ಮಾಡಿಕೊಂಡು ವಿಮಾನ ಟಿಕೆಟ್ಬುಕ್ ಮಾಡಿದ್ದೆವು. ಆದರೆ, ಭಾರತ ಸರ್ಕಾರ ವಿಮಾನ ಹಾರಾಟಕ್ಕೆ ಗಡುವು ನಿಗದಿಗೊಳಿಸಿ, ನಿರ್ಬಂಧ ಹೇರಿರುವುದರಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋ ಮೂಲಕ ತಿಳಿಸಿ, ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಭಾರತದ ನಾನಾ ಭಾಗಗಳ ವಿದ್ಯಾರ್ಥಿಗಳು, ಜನರು ಫಿಲಿಪ್ಪೀನ್ಸ್ನಲ್ಲಿ ಇದ್ದು, ಭಾರತಕ್ಕೆ ಮರಳಲು ಟಿಕೆಟ್ಬುಕ್ ಮಾಡಿಕೊಂಡಿದ್ದರು. ಆದರೆ, ವಾಪಸಾಗಲು ಸಾಧ್ಯವಾಗುತ್ತಿಲ್ಲ ಎಂದು ಗಾಬರಿಗೊಳಗಾಗಿದ್ದಾರೆ.
ನಮ್ಮನ್ನು ಇಲ್ಲಿ ಮನೆಯಲ್ಲೇ ಕೂಡಿ ಹಾಕಿದ್ದು, ಜೈಲಿನಲ್ಲಿರು ವಂತಾಗಿದೆ. ದಯವಿಟ್ಟು ಮರಳಿ ನಮ್ಮ ದೇಶಕ್ಕೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.