ಬೆಂಗಳೂರು ವಿವಿ ಕುಲಸಚಿವರ ವಾಪಸ್‌ಗೆ ವಿದ್ಯಾರ್ಥಿಗಳ ಆಗ್ರಹ

bu protest
Published on

ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿದ್ಯಾರ್ಥಿ ವಿರೋಧಿ ನಿಲುವು ತಾಳುತ್ತಿದೆ. ಕುಲಸಚಿವರು ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ. ಅವರನ್ನು ಸರ್ಕಾರ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ವಿವಿಯ ನೂರಾರು ವಿದ್ಯಾರ್ಥಿಗಳು ಸಿಂಡಿಕೇಟ್ ಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂ.ವಿವಿಯ ಸಿಂಡಿಕೇಟ್ ಸಭೆಗೆ ಸ್ನಾತಕೋತ್ತರ ಮತ್ತು ಸಂಶೋಧನಾರ್ಥಿಗಳ ಒಕ್ಕೂಟದ ಅನೇಕ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸದೆ, ನಮ್ಮ ಯಾವುದೇ ಬೇಡಿಕೆಗಳಿಗೆ ಸ್ಪಂಧಿಸುವಲ್ಲಿ ಆಡಳಿತವು ವಿಫಲವಾಗಿದೆ. ಈ ವೈಫಲ್ಯಕ್ಕೆ ಮೂಲ ಕುಲಸಚಿವ ಶೇಖ್ ಲತೀಫ್ ಅವರೇ ನೇರ ಕಾರಣ. ಅವರನ್ನು ಕೂಡಲೇ ವಿವಿಯಿಂದ ವರ್ಗಾವಣೆ ಮಾಡಬೇಕು ಇಲ್ಲವೇ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

2023-24ನೇ ಸಾಲಿನಲ್ಲಿ ದಾಖಲಾದ ಸಂಶೋಧನಾ ವಿದ್ಯಾರ್ಥಿಗಳಿಗೆ ಕೂಡಲೇ ಲ್ಯಾಪ್‌ಟಾಪ್ ವಿತರಿಸಬೇಕು. ಹಾಸ್ಟೆಲ್‌ಗಳಿಗೆ ಹಾಸಿಗೆ ದಿಂಬು, ಸ್ಟಡಿ ಟೇಬಲ್, ಚೇರ್ ಮತ್ತಿತರ ಪೀಠೋಪಕರಗಣ, ಮೂಲಸೌಕರ್ಯ ಪೂರೈಸಬೇಕು. ಅಪಘಾತ ತಡೆ ಹಾಗೂ ಕ್ಯಾಂಪಸ್ ಭದ್ರತೆ ದೃಷ್ಟಿಯಿಂದ ಜ್ಞಾನಭಾರತಿಯ ಮುಖ್ಯ ರಸ್ತೆಗಳ ಸಂಚಾರ ಬಂದ್ ಮಾಡಿ ಸ್ಥಳೀಯರಿಗೆ ಪರ್ಯಾಯ ರಸ್ತೆ ಸೌಲಭ್ಯ ಕಲ್ಪಿಸಲು ಸರ್ಕಾರದೊಂದಿಗೆ ವಿವಿಯ ಆಡಳಿತವು ಮಾತುಕತೆ ನಡೆಸಬೇಕು. ಹಾಸ್ಟೆಲ್ ಗಳಿಗೆ ಕೀಟನಾಶ ಔಷಧಿ ಸಿಂಪಡಿಸಬೇಕು.

ಮಹಿಳಾ ವಿದ್ಯಾರ್ಥಿಗಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ ಮತ್ತು ಡಿಸ್ಪೋಸೆಬಲ್ ಮಶಿನ್ ವಿತರಣೆ ಮಾಡಬೇಕು. ಡಾ.ಅಂಬೇಡ್ಕರ್ ಕೇಂದ್ರ ಗ್ರಂಥಾಲಯವನ್ನು 24/7 ಪರೀಕ್ಷಾ ಪೂರ್ವಭಾವಿ ತಯಾರಿ ಗ್ರಂಥಾಲಯವನ್ನಾಗಿಸಬೇಕು. ಹಾಸ್ಟೆಲ್ ರಸ್ತೆ ದುರಸ್ತಿ, ಬೀದಿ ದೀಪ ಅಳವಡಿಕೆ, ನಾಮಫಲಕಗಳನ್ನು ಅಳವಡಿಸಬೇಕು. ಸುರಕ್ಷತೆ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

10 ದಿನದಲ್ಲಿ ಸಮಸ್ಯೆ ಇತ್ಯರ್ಥ ಭರವಸೆ

ಹಾಸ್ಟೆಲ್‌ನಲ್ಲಿನ ಹಾಸಿಗೆ ದಿಂಬು ಒದಗಿಸುವುದು, ಕೀಟನಾಶ ಸಿಂಪಡಣೆ ಸೇರಿ 10 ದಿನದೊಳಗೆ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ. ಲ್ಯಾಪ್‌ಟಾಪ್ ಹಾಗೂ ಮುಖ್ಯ ರಸ್ತೆಯನ್ನು ಬಂದ್ ಮಾಡುವ ವಿಚಾರವು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು ಎಂದು ಕುಲಪತಿ ಡಾ. ಎಸ್.ಎಂ. ಜಯಕರ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net