

ಬೆಂಗಳೂರು: ಕೆ.ಆರ್.ಪುರಂನ ಕೇಂಬ್ರಿಡ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ 15ನೇ ಪದವಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಿ.ಇ ಮತ್ತು ಪಿ.ಹೆಚ್.ಡಿ ಪದವೀಧರರಿಗೆ ಪದವಿ ಪ್ರಧಾನ ಮಾಡಲಾಯಿತು.
ಡಾ. ಇಂದುಮತಿ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣದೊಂದಿಗೆ ಕಾಲೇಜಿನ ಪ್ರಮುಖ ಸಾಧನೆಗಳ ಸಮಗ್ರ ಅವಲೋಕನವನ್ನು ಸಭೆಗೆ ಒದಗಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೇಂಬ್ರಿಡ್ಜ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಿ.ಕೆ. ಮೋಹನ್ ಮಾತನಾಡಿ, ತಮ್ಮ ಸಂಸ್ಥೆಯು ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ಅದರ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಮಕ್ಕಳ ಸಾಧನೆಗೆ ತಮ್ಮ ಜೀವನವನ್ನು ಮುಡುಪಿಟ್ಟ ಪೋಷಕರಿಗೆ ವಿದ್ಯಾರ್ಥಿಗಳು ಸದಾ ಋಣಿಗಳಾಗಿರಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕರಾದ ಪದ್ಮಭೂಷಣ ಡಾ. ಪಿ. ಬಲರಾಮ್ ಮಾತನಾಡಿ, ತಮ್ಮ ಜೀವನ ಮತ್ತು ಸಂಶೋಧನೆಗಳ ಒಳನೋಟಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸುವುದರ ಜೊತೆಗೆ ಭವಿಷ್ಯದ ಪ್ರಯತ್ನಗಳಿಗೆ ಶುಭಕೋರಿದರು. ಮೈಕ್ರೋಸಾಫ್ಟ್ೃ ಇಂಡಿಯಾದ ಹಿರಿಯ ಪ್ರಧಾನ ಸಂಶೋಧಕ ಡಾ. ಸ್ವಾಮಿ ಮನೋಹರ್ ತಮ್ಮ ಭಾಷಣದಲ್ಲಿ ಶಿಕ್ಷಣದ ಉದ್ದೇಶವನ್ನು ಕುರಿತು ತಿಳಿಸಿದರು. ಮಾನವನ ಮಿದುಳಿನ ವಿಕಾಸ, ಯಶಸ್ವಿ ಜೀವನ ಮತ್ತು ಪ್ರತಿಜೀವನವನ್ನು ರೂಪಿಸುವಲ್ಲಿ ಅರಿವಿನ ಮೌಲ್ಯ ಹಾಗೂ ಸ್ಥಿತಿಸ್ಥಾಪಕತ್ವ ಮತ್ತು ಕಲ್ಪನೆಯ ಮಹತ್ವವನ್ನು ವಿವರಿಸಿದರು.
ಎಂಬೆಡೆಡ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಪ್ರಾದೇಶಿಕ ಮುಖ್ಯಸ್ಥ ಸುಮೀತ್ ವರ್ಮಾ ಮತ್ತಿತರರು ಪಾಲ್ಗೊಂಡಿದ್ದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸುನಿಲ್ ಕುಮಾರ್ ಕುಲಕರ್ಣಿ ಸರ್ವರನ್ನು ವಂದಿಸಿದರು.