

ಹೈದ್ರಾಬಾದ: ಕೊಲ್ಲಿಪಾಕಿಯ ಸೋಮೇಶ್ವರ, ಶ್ರೀಶೈಲದ ಮಲ್ಲಿಕಾರ್ಜುನ ಮತ್ತು ದ್ರಾಕ್ಷಾರಾಮ ಕ್ಷೇತ್ರದ ಭೀಮನಾಥಲಿಂಗಗಳಿಂದ ಆದಿ ಜಗದ್ಗುರು ಪಂಚಾಚಾರ್ಯರಲ್ಲಿ ಆಚಾರ್ಯತ್ರಯರು ಅವತಾರವೆತ್ತಿದ್ದಾರೆ. ಈ ಮೂರು ಲಿಂಗಗಳಿಂದ ಈ ಪ್ರದೇಶವನ್ನು ತ್ರಿಲಿಂಗ ದೇಶ ಎಂದು ಕರೆಯಲಾಗುತ್ತದೆ. ತ್ರಿಲಿಂಗದೇಶ ಎಂಬುದೇ ತೆಲಂಗಾಣ ಎಂದಾಗಿದೆ ಎಂದು ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.
ಹೈದ್ರಾಬಾದ ಮಹಾನಗರದ ಬಲಕಂಪೇಟೆಯ ವೀರಶೈವ ಸೇವಾ ಸಮಾಜ ಸಂಘಟನೆ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ತಪೋನುಷ್ಠಾನದಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಆಚಾರ್ಯ ತ್ರಯರು ಪ್ರಕಟಗೊಂಡ ಕಾರಣದಿಂದಲೇ ಪ್ರಾಚೀನ ಕಾಲದಿಂದಲೂ ತೆಲುಗು ಪ್ರಾಂತ್ಯದಲ್ಲಿ ವೀರಶೈವ ಲಿಂಗಾಯತರು ಬಹು ಸಂಖ್ಯೆಯಲ್ಲಿದ್ದಾರೆ. ಇವರು ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳನ್ನು ಬದ್ಧತೆಯಿಂದ ಅರ್ಚಿಸಿ ಆರಾಧಿಸುವವರಾಗಿದ್ದು ತ್ರಿಲಿಂಗದೇಶ ಎಂಬುದಕ್ಕೆ ಅದೂ ಒಂದು ಕಾರಣ. ವೀರಶೈವ ಸಿದ್ಧಾಂತಕ್ಕೆ ಶ್ರೀಪತಿ ಪಂಡಿತಾರಾಧ್ಯರು ಬರೆದ ಶ್ರೀಕರ ಭಾಷ್ಯೆ ಹಾಗೂ ಮೊಟ್ಟ ಮೊದಲು ತೆಲಗು ಭಾಷೆಯಲ್ಲಿ ರಚನೆಯಾದ ಬಸವ ಪುರಾಣ ಬರೆದ ಪಾಲ್ಕುರಿಕೆ ಸೋಮನಾಥ ಇದೇ ತ್ರಿಲಿಂಗ ದೇಶದವರೆಂಬುದು ಮತ್ತೊಂದು ಮಹತ್ವದ ಅಂಶ ಎಂದು ಜಗದ್ಗುರುಗಳು ವಿವರಿಸಿದರು.
ಕಾಶೀ ಜಗದ್ಗುರುಗಳ ಶ್ರಾವಣ ಮಾಸದ ಮೊದಲ 15 ದಿನಗಳ ಅನುಷ್ಠಾನ ಆಂಧ್ರ ಮತ್ತು ತೆಲಂಗಾಣ ಪ್ರಾಂತ್ಯದಲ್ಲಿ ನಡೆಯಲಿದ್ದು, ಆ.8ರಂದು ನಡೆಯುವ ಜಗದ್ಗುರುಗಳ ಜನ್ಮದಿನೋತ್ಸವ ಕಾರ್ಯಕ್ರಮದ ನಂತರ ಪೀಠಕ್ಕೆ ಹೋಗಿ ಕೊನೆಯ 15 ದಿನಗಳ ಅನುಷ್ಟಾನವನ್ನು ಮುಂದುವರೆಸಲಿದ್ದಾರೆ.