

ಮಹಾಲಿಂಗಪುರ: ವಿದ್ಯಾರ್ಥಿಗಳ ಬಾಳು ಬಂಗಾರವಾಗಬೇಕಾದರೆ ದುಶ್ಚಟಗಳಿಂದ ದೂರವಿದ್ದು, ಸಿಕ್ಕಿರುವ ಸುವರ್ಣಾವಕಾಶ ಸದುಪಯೋಗಪಡಿಸಿಕೊಳ್ಳಬೇಕೆಂದು ರನ್ನಬೆಳಗಲಿಯ ಸಿದ್ದರಾಮ ಶಿವಯೋಗಿಗಳು ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಸಂಸ್ಕಾರದ ಕೊರತೆಯಿಂದಾಗಿ ವಿದ್ಯಾರ್ಥಿಗಳು, ತರುಣರು ದುಶ್ಚಟಗಳಿಗೆ ಬಲಿಯಾಗಿ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ.
ವಿದ್ಯಾರ್ಥಿಗಳು ತಂದೆ, ತಾಯಿ, ಗುರುಗಳಿಗೆ ವಿದೇಯರಾಗಿ ಸದಾ ಚಿಂತನಶೀಲ, ಕ್ರಿಯಾಶೀಲರಾಗಿ ವ್ಯವಸಮುಕ್ತ ಬದುಕನ್ನು ರೂಪಿಸಿಕೊಂಡು ಪಾಲಕರ, ಮನೆತನದ, ಊರಿನ ಕೀರ್ತಿ ಹೆಚ್ಚಿಸುವ ಮಕ್ಕಳಾಗಿ ಬೆಳೆಯಬೇಕು ಎಂದರು.
ಇದನ್ನೂ ಓದಿ: ಪಟ್ಟಣದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ
ಪುರಸಭೆ ಸದಸ್ಯ ರವಿ ಜವಳಗಿ, ಪತ್ರಕರ್ತ ಚಂದ್ರಶೇಖರ ಮೋರೆ ಮಾತನಾಡಿ,ಧರ್ಮಸ್ಥಳ ಧರ್ಮಾಧಿಕಾರಿಗಳು ಗ್ರಾಮಾಭಿವೃದ್ಧಿ ಸಂಸ್ಥೆ ಮೂಲಕ ಒಂದು ಸರ್ಕಾರ ಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಮೀರ ಚಿಪ್ಪಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಾಲಿಂಗಪುರ ವಲಯ ಮೇಲ್ವಿಚಾರಕ ಎಚ್.ಲೋಕೇಶ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಿವಿಧ ಸಾಮಾಜಿಕ ಸೇವಾ ಕಾರ್ಯಗಳ ಮಾಹಿತಿ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿಗಳಾದ ರಾಜು ಎಸ್., ಶಿಕ್ಷಕರಾದ ಎಸ್.ಎಲ್.ಕಂಬಾರ, ಡಿ.ಬಿ.ಕುಲಕರ್ಣಿ, ಪಿ.ಸಿ.ಕೀರನ್ನವರ, ಮಹಿಳಾ ಒಕ್ಕೂಟದ ಸಾವಿತ್ರಿ ಗೊಂದಿ, ಭೀಮವ್ವ ಸೇರಿ ಹಲವರು ಇದ್ದರು.