

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಇನ್ನಾ ಗ್ರಾಮದಲ್ಲಿ ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗದ ಟವರ್ ನಿರ್ಮಾಣ ಕಾಮಗಾರಿ ಗ್ರಾಮಸ್ಥರ ಭಾರಿ ವಿರೋಧದ ನಡುವೆಯೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಬುಧವಾರ ಆರಂಭಗೊಂಡಿದೆ. ಕಾಮಗಾರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು ಸ್ಥಳದಲ್ಲೇ ಜಮಾಯಿಸಿದ್ದು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಇನ್ನಾ ಗ್ರಾಮದ ಅನ್ನೋಜಿಗೋಳಿ ಸಮೀಪದ ಗಣಪತಿ ಹೆಗ್ಡೆ ಎಂಬುವರ ಖಾಸಗಿ ಜಮೀನಿನಲ್ಲಿ ಬುಧವಾರ ಟವರ್ ನಿರ್ಮಾಣಕ್ಕೆ ಏಕಾಏಕಿ ಕಾಮಗಾರಿ ಆರಂಭಿಸಿದ್ದು, ಭಾರಿ ಗಾತ್ರದ ಹೊಂಡಗಳನ್ನು ತೆಗೆಯಲಾಗಿದೆ. ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ ಇನ್ನಾ ಗ್ರಾಮಸ್ಥರು ಕಾಮಗಾರಿಗೆ ತಡೆಯೊಡ್ಡಲು ಯತ್ನಿಸಿದ್ದು, ಗುತ್ತಿಗೆ ಕಂಪನಿ ಹಾಗೂ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಬಗ್ಗದ ಅಧಿಕಾರಿಗಳು ಕಾಮಗಾರಿ ಮುಂದುವರಿಸಿದರು. ಗ್ರಾಮಸ್ಥರು ಹಾಗೂ ಹೋರಾಟ ಸಮಿತಿ ಸದಸ್ಯರು ಕಾಮಗಾರಿಗೆ ತಾತ್ಕಾಲಿಕ ತಡೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮೊರೆಹೋದರೂ ಪ್ರಯೋಜನವಾಗಿಲ್ಲ.
ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಿಂದ ಸಂಪರ್ಕಗೊಳ್ಳುವ ಅನ್ನೋಜಿಗೋಳಿ ರಸ್ತೆಗೆ ಪೊಲೀಸರು ಬೆಳಗ್ಗೆಯೇ ಬ್ಯಾರಿಕೇಡ್ ಅಳವಡಿಸಿ ಕಾಮಗಾರಿಗೆ ಬಂದೋಬಸ್ತ್ ಕಲ್ಪಿಸಿದರು. ಪ್ರತಿ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಲಾರಂಭಿಸಿದ್ದು, ಸಾರ್ವಜನಿಕರ ವಿರೋಧದ ಬಳಿಕ ತಪಾಸಣೆ ನಿಲ್ಲಿಸಲಾಯಿತು.
ಉಡುಪಿಯ ಎಲ್ಲೂರಿನಿಂದ ಕಾಸರಗೋಡಿಗೆ ವಿದ್ಯುತ್‌ಲೈನ್ ಹಾದುಹೋಗಲು ಹಲವು ವರ್ಷಗಳಿಂದ ಸಮೀಕ್ಷೆಗಳು ನಡೆದಿದ್ದು, ಬಳಿಕ ಗುತ್ತಿಗೆದಾರ ಸಂಸ್ಥೆಗಳು ಟವರ್ ನಿರ್ಮಾಣಕ್ಕೆ ಮುಂದಾಗಿದ್ದವು. ಈ ಹಿಂದೆ ಅನ್ನೋಜಿಗೋಳಿ ಸಮೀಪ ಟವರ್ ನಿರ್ಮಾಣಕ್ಕೆ ಮುಂದಾದಾಗ ಸ್ಥಳೀಯರು ವಿರೋಧಿಸಿ ಸ್ಥಳದಲ್ಲೇ ಟೆಂಟ್ ಹಾಕಿ ಅಡುಗೆ ಮಾಡುವ ಮೂಲಕ ಅಹೋರಾತ್ರಿ ಧರಣಿ ಕೈಗೊಂಡಿದ್ದರು. ಗ್ರಾಮಸ್ಥರ ತೀವ್ರ ವಿರೋಧದಿಂದಾಗಿ ಕಾಮಗಾರಿಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಟವರ್ ನಿರ್ಮಾಣಕ್ಕೆ ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದು, ಗ್ರಾಮಸ್ಥರು ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಹಾಗೂ ಭೂ ಮಾಲೀಕರ ಒಪ್ಪಿಗೆಯನ್ನೂ ಪಡೆಯದೇ ಕಾಮಗಾರಿ ಆರಂಭಿಸಿರುವುದು ನ್ಯಾಯಾಂಗಕ್ಕೆ ಮಾಡಿದ ಅವಮಾನ. ನಡುಇನ್ನಾ ನಿವಾಸಿ ಶಾರದಾ ಶೆಟ್ಟಿ ಎಂಬುವರಿಗೆ ತಮ್ಮ ಜಮೀನಿನ ಗೇಟ್ ತೆರೆಯುವಂತೆ ಅಧಿಕಾರಿಗಳು ಗದರಿದ್ದು, ಕಂಪನಿ ಹಾಗೂ ಪೊಲೀಸರ ದರ್ಪವನ್ನು ಸಹಿಸಲಾಗದು. ಕಾನೂನು ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಮಾಹಿತಿ ನೀಡದೆ ಖಾಸಗಿ ಜಾಗ ಅತಿಕ್ರಮಿಸಿ ಕಾಮಗಾರಿ ಆರಂಭಿಸುವುದು ಅನ್ಯಾಯದ ಪರಮಾವಧಿ. ಖಾಸಗಿ ಮಾಲೀಕರ ಒಪ್ಪಿಗೆ ಇಲ್ಲದೆ ಜಾಗ ಪ್ರವೇಶಿಸುವುದು ಅಪರಾಧ. ಕಾನೂನು ಬಾಹಿರವಾಗಿ ಕಾಮಗಾರಿ ನಡೆಸುವ ಮೂಲಕ ಇನ್ನಾ ಗ್ರಾಮಸ್ಥರಿಗೆ ಅನ್ಯಾಯ ಮಾಡಲಾಗುತ್ತಿದೆ. - ಚಂದ್ರಹಾಸ್ ಶೆಟ್ಟಿ, ಹೋರಾಟ ಸಮಿತಿ ಕಾರ್ಯದರ್ಶಿ ನಮ್ಮ ಗ್ರಾಮದಲ್ಲಿ ಈಗಾಗಲೇ ಒಂದು ಲೈನ್ ಹಾದುಹೋಗಿದೆ. ಇದೀಗ ಮತ್ತೆ ಈ ಭಾಗದಲ್ಲಿ ಟವರ್ ನಿರ್ಮಾಣವಾದರೆ ಕೃಷಿನ್ನೇ ನಂಬಿ ಬದುಕುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬೀಳುವುದು ನಿಶ್ಚಿತ. ಯಾವುದೇ ಮಾಹಿತಿ ನೀಡದೆ ಕಾಮಗಾರಿಗೆ ಮುಂದಾಗುವುದು ಕಾನೂನು ಉಲ್ಲಂಘನೆಯಾಗಿದೆ. - ಅಮರನಾಥ್ ಶೆಟ್ಟಿ, ಹೋರಾಟ ಸಮಿತಿ ಅಧ್ಯಕ್ಷ.