

ಚಳ್ಳಕೆರೆ: ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸಿಕೊಳ್ಳುವ ಗುಣ ಇರಬೇಕು ಎಂದು ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಿ.ಆರ್.ಪ್ರಮಿಳಾ ಹೇಳಿದರು.
ನಗರದ ಅಜ್ಜನಗುಡಿ ರಸ್ತೆಯಲ್ಲಿನ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಬುಧವಾರ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ನಾಗರಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಇದಕ್ಕೆ ನೆರವಾಗುವ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ದೇಶವನ್ನು ಸಾಮಾಜಿಕವಾಗಿ ಬಲವರ್ಧನೆ ಮಾಡುವ ಚಿಂತನೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಉದ್ಯೋಗಕ್ಕೆ ಸೀಮಿತವಾಗಬಾರದು. ಸ್ವಯಂ ಜಾಗೃತಿ ಮತ್ತು ದೇಶದ ಘನತೆ ಕಾಪಾಡುವ ರೀತಿಯಲ್ಲಿ ಬದುಕು ರೂಪಿಸಿಕೊಳ್ಳುವ ಕೌಶಲ ಇರಬೇಕು ಎಂದು ಕಿವಿಮಾತು ಹೇಳಿದರು.
ಉಪನ್ಯಾಸಕ ಕೆ.ಬಿ.ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗದೇ ತನ್ನ ಪರಿಸರ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿಗಳನ್ನು ಕಲಿಯಬೇಕು. ದೇಶದ ಪ್ರಜೆಯಾಗಿ ಹಕ್ಕು ಮತ್ತು ಕರ್ತವ್ಯಗಳ ಜಾಗೃತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಎನ್.ಎಲ್.ಹೇಮಂತ್‌ರಾಜು, ಕಚೇರಿ ಅಧೀಕ್ಷಕಿ ಎಂ.ಎಸ್.ವಾಣಿಶ್ರೀ, ಉಪನ್ಯಾಸಕ ಜಿ.ಎಸ್.ರಾಘವೇಂದ್ರನಾಯಕ, ಜಿ.ದೊರೆಸ್ವಾಮಿ, ವಿ.ವಿಶ್ವನಾಥ್, ಕಲ್ಲೇಶ್, ನಾಗೇಶ್, ಪ್ರಶಿಕ್ಷಣಾರ್ಥಿಗಳಾದ ಎಂ.ಯತೀಶ್, ಸಿದ್ದಲಿಂಗಮ್ಮ, ಪಿ.ಪುಷ್ಪಾ, ಆಕಾಶ್, ಗಿರೀಶ್, ಅಶ್ವಿನಿ, ಕಿಶೋರ್, ಭೀಮಪ್ಪ, ಶ್ರೀಕಾಂತ್, ಸ್ಪಂದನಾ, ಕವಿತಮ್ಮ, ಅಖಿಲ, ರಮ್ಯ, ತಿಪ್ಪೇಸ್ವಾಮಿ, ನಂದಿನಿ ಇದ್ದರು.