ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡದಿದ್ದರೆ ಶಿಸ್ತುಕ್ರಮ: ಶಾಸಕ ಡಿ.ಜಿ. ಶಾಂತನಗೌಡ ಎಚ್ಚರಿಕೆ

hnl
Published on

ಹೊನ್ನಾಳಿ: ವಿದ್ಯಾರ್ಥಿಗಳಿಗೆ ಪೌಷ್ಟಿಕಾಹಾರ ನೀಡದಿದ್ದರೆ ನಿಲಯ ಪಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ಜಿ. ಶಾಂತನಗೌಡ ಎಚ್ಚರಿಸಿದರು.

ಪಟ್ಟಣದ ಹಳೇ ಆಸ್ಪತ್ರೆಯಲ್ಲಿ ಸೋಮವಾರ ಆರೋಗ್ಯ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಆಶ್ರಯದಲ್ಲಿ ನಿಲಯ ಪಾಲಕರಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಡತನ ಹಿನ್ನೆಲೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಹಾಸ್ಟೆಲ್ ಪ್ರವೇಶ ಪಡೆಯುತ್ತಾರೆ. ಅವರ ಸಂಪೂರ್ಣ ಹೊಣೆ ನಿಮ್ಮದು ಎಂದರು.

ರಾಜ್ಯದ ವಿವಿಧ ಕಡೆ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಊಟ ಮಾಡಿ ಅಸ್ವಸ್ಥಗೊಂಡ ಘಟನೆಗಳಿವೆ. ಈಗಲೇ ನೀವು ಎಚ್ಚೆತ್ತುಕೊಂಡು ಶುಚಿ, ರುಚಿ ಊಟ ನೀಡಿ. ಸರ್ಕಾರ ಶಿಕ್ಷಣಕ್ಕೆ ಕೋಟ್ಯಾಂತರ ವ್ಯಯಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಒಳ್ಳೆಯ ಊಟ ನೀಡಿ. ಈ ಬಗ್ಗೆ ವಿದ್ಯಾರ್ಥಿಗಳಿಂದ ಒಂದೇ ಒಂದು ದೂರು ಬಂದರೂ ನಾನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸರ್ಕಾರ ಊಟ, ವಸತಿ ಮತ್ತಿತರ ಅವಶ್ಯಕ ಪರಿಕರಗಳನ್ನು ಉಚಿತವಾಗಿ ನೀಡುತ್ತಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ, ಉತ್ತಮ ಅಂಕ ಗಳಿಸಬೇಕು ಎಂದು ಕಿವಿಮಾತು ಹೇಳಿದರು.

ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ಊಟ ನೀಡಬೇಕು. ಆಹಾರ ತಯಾರಿಸಲು ಶುದ್ಧ ನೀರು ಬಳಸಬೇಕು. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಕರೊನಾ ಬಗ್ಗೆ ಎಚ್ಚರ: ಮತ್ತೆ ಕರೊನಾ ಸೋಂಕು ಹರಡುವ ಭೀತಿ ಇರುವ ಕಾರಣ ಎಲ್ಲರೂ ಮುಂಜಾಗ್ರತೆ ವಹಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೃತ್ಯುಂಜಯ, ಸಮಾಜ ಕಲ್ಯಾಣಾಧಿಕಾರಿ ಉಮಾ, ಸಿಡಿಪಿಒ ಮಹಾಂತೇಶ್ ಪೂಜಾರ್, ಆರೋಗ್ಯ ಇಲಾಖೆಯ ಬಿಎಚ್‌ಇಒ ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net