

ಮಲೇಬೆನ್ನೂರು: ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಕುಂಬಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ (ಸಿಬಿಸಿ) ಸದಸ್ಯರು ಮಂಗಳವಾರ ಮನೆ ಮನೆ ಭೇಟಿ ಆರಂಭಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಬಾರಿ ಪ್ರಥಮ ಪಿಯು ತರಗತಿಗೆ ದಾಖಲಾತಿ ಕೊರತೆ ಎದುರಾಗಿದೆ. ಈಗ ಎಸ್ಸೆಸ್ಸೆಲ್ಸಿ-2 ರ ಫಲಿತಾಂಶ ಪ್ರಕಟವಾಗಿದೆ.
ಜಿಗಳಿ, ಗುಡ್ಡದ ಬೇವಿನಹಳ್ಳಿ, ನಿಟ್ಟೂರು, ಕುಂಬಳೂರು ಗ್ರಾಮಗಳ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ, ಕಾಲೇಜಿನ ಸೌಲಭ್ಯ ಬಗ್ಗೆ ಮಾಹಿತಿ ನೀಡಿ, ಪ್ರವೇಶ ಪಡೆಯುವಂತೆ ಮನವೊಲಿಸುವ ಯತ್ನವನ್ನು ಶಿಕ್ಷಕರು ಮಾಡಿದರು.
ಪ್ರಭಾರ ಪ್ರಾಚಾರ್ಯ ಹನುಮಂತಯ್ಯ, ಉಪನ್ಯಾಸಕರಾದ ಮರುಳಸಿದ್ದಪ್ಪ, ಲತಾ, ಸಿಬಿಸಿ ಸದಸ್ಯರಾದ ಎನ್.ಕಲ್ಲೇಶ್ ಬಾಬು, ಬೆನ್ನೂರು ರಮೇಶ್, ಸದಾನಂದ, ವೈ.ಶ್ರೀನಿವಾಸಮೂರ್ತಿ ಮತ್ತಿತರರು ತಂಡದಲ್ಲಿದ್ದರು.
2018 ರಲ್ಲಿಯೂ ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆಯಾಗಿತ್ತು. ಆಗಲೂ ಇದೇ ತಂಡ ಮನೆ ಮನೆಗೆ ಭೇಟಿ ನೀಡಿದ್ದು ಸ್ಮರಣೀಯ.