ವಿದ್ಯಾರ್ಥಿನಿಲಯ ನಿರ್ಮಾಣ ನನೆಗುದಿಗೆ

ವಿದ್ಯಾರ್ಥಿನಿಲಯ ನಿರ್ಮಾಣ ನನೆಗುದಿಗೆ
Published on

ಎಸ್.ಲಿಂಗರಾಜು ಮಂಗಲ ಹನೂರು

ತಾಲೂಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ವಿಚಾರ ಸದ್ದಿಲ್ಲದಂತಾಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮನೆ ಮಾಡಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ತಾಲೂಕಿನ ಬಂಡಳ್ಳಿ ಗ್ರಾಮಕ್ಕೆ ಮಂಜೂರಾಗಿದ್ದ ಹಾಸ್ಟೆಲ್ ಹನೂರಿಗೆ ಸ್ಥಳಾಂತರವಾಗಿತ್ತು. ಇದನ್ನು ಉಳಿಸಿಕೊಳ್ಳುವ ಹಾಗೂ ಸ್ಥಳಾಂತರದ ಬಗ್ಗೆ ಹಾಲಿ ಶಾಸಕ ಎಂ.ಆರ್ ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ ನಡುವೆ ಹಗ್ಗಜಗ್ಗಾಟ ಶುರುವಾಗಿತ್ತು. ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದೀಗ ವಿಚಾರ ಮೌನವಾಗಿದೆ. ಈ ಕಾರ್ಯ ಏನಾಯಿತು ಎಂದು ಸಾರ್ವಜನಿಕರಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಇದರಿಂದ ಕೈಗೊಳ್ಳಬೇಕಿದ್ದ ಕಟ್ಟಡ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಂತಾಗಿದೆ.

ಬಂಡಳ್ಳಿ, ಶಾಗ್ಯ, ಮಣಗಳ್ಳಿ ಸೇರಿದಂತೆ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಂಡಳ್ಳಿ ಗ್ರಾಮಕ್ಕೆ ಈ ಹಿಂದೆಯೇ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 4.5 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಮಂಜೂರಾಗಿತ್ತು. ಆದರೆ, ಸ್ಥಳಾವಕಾಶದ ಕೊರತೆಯಿಂದ ಕಟ್ಟಡ ನಿರ್ಮಾಣವಾಗಿರಲಿಲ್ಲ. ಪ್ರಸ್ತುತ ಗ್ರಾಮದ ಬಾಡಿಗೆ ಹೆಂಚಿನ ಮನೆಯಲ್ಲಿ ಹಾಸ್ಟೆಲ್ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು. ಶಾಸಕ ಎಂ.ಆರ್.ಮಂಜುನಾಥ್ ಅವರ ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಬಂಡಳ್ಳಿ ಗ್ರಾಮಕ್ಕೆ ಮಂಜೂರಾಗಿದ್ದ ವಿದ್ಯಾರ್ಥಿ ನಿಲಯವನ್ನು ಹನೂರಿಗೆ ಸ್ಥಳಾಂತರಿಸಿದ್ದು, ಕಟ್ಟಡ ನಿರ್ಮಾಣಕ್ಕೆ ತಹಸೀಲ್ದಾರ್ ಕಚೇರಿಯ ಆವರಣದ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಪಕ್ಕದಲ್ಲೇ ಜಾಗ ಗುರುತಿಸಲಾಗಿದೆ.

ಹಾಸ್ಟೆಲ್ ಸ್ಥಳಾಂತರಿಸಿರುವ ಬಗ್ಗೆ ಈ ಭಾಗದ ಪರಿಶಿಷ್ಟ ಪಂಗಡದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಫೆ.14 ರಂದು ಶಾಸಕ ಎಂ.ಆರ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ಹನೂರಿನಲ್ಲಿ ನಡೆದ ನಾಯಕ ಹಾಗೂ ಗಿರಿಜನ ಸಮುದಾಯದ ಮುಖಂಡರ ಕುಂದುಕೊರತೆ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಶಾಸಕರು ಹಾಸ್ಟೆಲ್ ಸ್ಥಳಾಂತರಿಸಿರುವ ಅಗತ್ಯತೆಯನ್ನು ಮುಖಂಡರಿಗೆ ಮನವರಿಕೆ ಮಾಡಿದರು. ಜತೆಗೆ ಬಂಡಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್‌ಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದಾಗಿ ಭರವಸೆ ನೀಡಿದ್ದರಲ್ಲದೆ ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದರು.

ಹಾಗಾಗಿ ಹಾಲಿ ಶಾಸಕ ಎಂ.ಆರ್ ಮಂಜುನಾಥ್ ಅವರು ಹಾಸ್ಟೆಲ್ ಅನ್ನು ಹನೂರಿನಲ್ಲೇ ತೆರೆಯಬೇಕು ಎಂಬ ನಿರ್ಧಾರ ಹೊಂದಿದ್ದರೆ, ಇತ್ತ ಮಾಜಿ ಶಾಸಕ ಆರ್.ನರೇಂದ್ರ ಅವರು ಮಂಜೂರಾಗಿದ್ದ ಹಾಸ್ಟೆಲ್ ಬಂಡಳ್ಳಿ ಗ್ರಾಮದಲ್ಲೇ ಉಳಿಯಬೇಕು ಎಂಬ ದೃಢ ಸಂಕಲ್ಪವನ್ನು ಹೊಂದಿದ್ದರು. ಇದರಿಂದ ಹಾಸ್ಟೆಲ್ ನಿರ್ಮಾಣ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಹಾಲಿ ಶಾಸಕರ ವಾದವೇನು?: ಹನೂರು ತಾಲೂಕು ಕೇಂದ್ರ. ಇಲ್ಲಿಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಬಸ್ ಸೌಕರ್ಯ ಉತ್ತಮವಾಗಿದೆ. ಹಾಗಾಗಿ ಹನೂರಿನಲ್ಲಿ ಹಾಸ್ಟೆಲ್ ನಿರ್ಮಾಣವಾದರೆ ಪಾಲಾರ್, ಮಲೆಮಹದೇಶ್ವರ ಬೆಟ್ಟ, ಹೂಗ್ಯಂ, ಪೊನ್ನಾಚಿ, ಬೈಲೂರು ಹಾಗೂ ಹೆಚ್ಚು ಅಂತರವನ್ನು ಹೊಂದಿರುವ ದೂರದ ಊರಿನ ಮಕ್ಕಳಿಗೆ ಹಾಗೂ ಪಾಲಕರಿಗೆ ಅನುಕೂಲವಾಗಲಿದೆ. ಜತೆಗೆ ಮಕ್ಕಳ ರಕ್ಷಣೆಯ ಹಿತದೃಷ್ಟಿಯಿಂದ ಉತ್ತಮವಾಗಿದೆ. ಆದರೆ ಬಂಡಳ್ಳಿಯಲ್ಲಿ ಹಾಸ್ಟೆಲ್ ತೆರೆದರೆ ಈ ಭಾಗದ 3 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳಿಗೆ ಮಾತ್ರ ಅನುಕೂಲವಾಗುತ್ತದೆ. ಹನೂರಿನಲ್ಲಿ ತೆರೆದರೆ ತಾಲೂಕಿನ 25 ಗ್ರಾಪಂ ವ್ಯಾಪ್ತಿಯ ಮಕ್ಕಳಿಗೂ ಅನುಕೂಲವಾಗಲಿದೆ ಎಂಬುದು ಹಾಲಿ ಶಾಸಕ ಎಂ.ಆರ್.ಮಂಜುನಾಥ್ ಅವರ ವಾದವಾಗಿದೆ.

ಮಾಜಿ ಶಾಸಕರ ವಾದವೇನು?: ಗ್ರಾಮದ ಶಾಲೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಅಧಿಕಾರಿಗಳ ತಪ್ಪು ಮಾಹಿತಿಯಿಂದ ಹಾಸ್ಟೆಲ್ ಅನ್ನು ಹನೂರಿಗೆ ಸ್ಥಳಾಂತರ ಮಾಡಲಾಗಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಈಗಾಗಲೇ ಗ್ರಾಮದ ಬಾಡಿಗೆ ಹೆಂಚಿನ ಮನೆಯಲ್ಲಿ ಹಾಸ್ಟೆಲ್ ಕಾರ್ಯನಿರ್ವಹಿಸುತ್ತಿದೆ. ಆದರೆ ಅಗತ್ಯ ಮೂಲಸೌಕರ್ಯ ಇಲ್ಲದ ಪರಿಣಾಮ ಇಲ್ಲಿಗೆ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿಲ್ಲ. ಹಾಸ್ಟೆಲ್ ಗ್ರಾಮದಲ್ಲೇ ಉಳಿಯಬೇಕು. ಗ್ರಾಮೀಣ ಪ್ರದೇಶಕ್ಕೆ ಮಂಜೂರಾಗಿರುವ ಈ ಹಾಸ್ಟೆಲ್ ಅನ್ನು ಹನೂರಿಗೆ ಸ್ಥಳಾಂತರಿಸುವುದು ಸರಿಯಲ್ಲ ಎಂಬುದು ಮಾಜಿ ಶಾಸಕ ಆರ್.ನರೇಂದ್ರ ಅವರ ವಾದವಾಗಿದೆ.

ಪರ, ವಿರೋಧ ವ್ಯಕ್ತ: ಹನೂರಿನ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ನಾಯಕರು ಹಾಗೂ ಗಿರಿಜನ ಮುಖಂಡರ ಕುಂದುಕೊರತೆ ಸಭೆಯಲ್ಲಿ ಹಾಸ್ಟೆಲ್ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಮ.ಬೆಟ್ಟದ ಭಾಗದ ಕೆಲ ಮುಖಂಡರು ಹಾಸ್ಟೆಲ್ ಹನೂರಿನಲ್ಲೇ ಸ್ಥಾಪಿಸುವುದರಿಂದ ಅನುಕೂಲವಾಗಲಿದೆ ಎಂದರೆ, ಬಂಡಳ್ಳಿ ಭಾಗದ ಮುಖಂಡರು ಗ್ರಾಮದಲ್ಲೇ ಹಾಸ್ಟೆಲ್ ಸ್ಥಾಪನೆಯಾಗಬೇಕು ಎಂಬುದಾಗಿ ಪರ, ವಿರೋಧ ವ್ಯಕ್ತವಾಗಿತ್ತು.

ಇದರಿಂದ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಂತಾಗಿದೆ. ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಟ್ಟಡ ಸಿಗದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net