

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ದೊರೆತ್ತಿದ್ದು, ಬಸ್ನಲ್ಲಿ ಪ್ರಯಾಣಿಸಲು ನೂಕುನುಗ್ಗಲು ಉಂಟಾಗುತ್ತಿದೆ.
ಯೋಜನೆಗೆ ಚಾಲನೆ ನೀಡಿ ತಿಂಗಳು ಕಳೆಯುತ್ತಾ ಬಂದರೂ ಬಸ್ನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೆಲವೆಡೆ ಮಹಿಳೆಯರು ಬಸ್ ಹತ್ತುವಾಗ ಡೋರ್, ಕಿಟಕಿಯ ಸರಳುಗಳು ಕಿತ್ತುಕೊಂಡು ಬಂದಿರುವ ಫೋಟೋ ಹಾಗು ವಿಡಿಯೋವನ್ನು ನಾವು ನೋಡಿದ್ದೇವೆ.
ಇದೀಗ ಘಟನೆ ಒಂದರಲ್ಲಿ ವಿದ್ಯಾರ್ಥಿನಿ ಓರ್ವಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಜಾತವಾರಹೊಸಹಳ್ಳಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ನಡುವೆ ಸಂಚರಿಸುವ ಬಸ್ನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ವೇಳೆ ವಿದ್ಯಾರ್ಥಿನಿ ಬಸ್ ಫುಟ್ಬೋರ್ಡ್ ಏರಿದ್ದು, ಚಲಿಸುತ್ತಿರುವಾಗಲ್ಲೇ ನಿಲ್ಲಲು ಸಾಧ್ಯವಾಗದೆ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಎಚ್ಚತ್ತೆ ವಿದ್ಯಾರ್ಥಿನಿ ಮೇಲೆದ್ದು ನಿಂತಿದ್ದಾಳೆ. ಇಲ್ಲವಾದ್ದಲ್ಲಿ ಅಕೆಯ ತಲೆ ಚಕ್ರದ ಅಡಿ ಸಿಲುಕಿ ಮೃತಪಡುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರಿಗೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಇಯಿಂದ ಸಮರ್ಪಕ ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹಗಳು ಕೇಳಿ ಬರುತ್ತಿವೆ.