

ಹೊನ್ನಾಳಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾಲೇಜಿನ ಆವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಪ್ರಾಚಾರ್ಯ ಡಾ.ಧನಂಜಯ ವಿದ್ಯಾರ್ಥಿಗಳಿಗೆ ತಿಳಿಸಿದರು.
ಹೊನ್ನಾಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಎನ್‌ಎಸ್‌ಎಸ್ ವತಿಯಿಂದ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸ್ವಚ್ಛತೆ ಬಗ್ಗೆ ಇಚ್ಛಾಶಕ್ತಿ ಹಾಗೂ ಜವಾಬ್ದಾರಿ ಇದ್ದಾಗ ಮಾತ್ರ ಸುತ್ತಮುತ್ತಲಿನ ಪ್ರದೇಶವೂ ಸ್ವಚ್ಛವಾಗಿಟ್ಟುಕೊಳ್ಳುವ ಅರಿವು ಮೂಡುತ್ತದೆ ಎಂದರು.
ದುಶ್ಚಟ, ದುರ್ನಡತೆಯಿಂದ ದೂರ ಇದ್ದು, ಓದು ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಸಮಾಜ ನಿಮ್ಮನ್ನು ಗೌರವಿಸುತ್ತದೆ. ಅಲ್ಲದೆ ಪಾಲಕರೂ ಸಂತಸ ಪಡುತ್ತಾರೆ ಎಂದರು.
ದೈಹಿಕ ನಿರ್ದೇಶಕ ಡಾ.ಹರೀಶ್, ಗ್ರಂಥಪಾಲಕ ನಾಗರಾಜ್‌ನಾಯ್ಕ, ಎನ್‌ಎಸ್‌ಎಸ್‌ನ ಧನಂಜಯ ಮೂರ್ತಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಉಪಸ್ಥಿತರಿದ್ದರು.