

ಬ್ಯಾಡಗಿ: ಹಣ ಕದ್ದ ಆರೋಪ ಹೊರಿಸಿ ವಸತಿ ಶಾಲೆಯ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಕಟ್ಟಿಗೆಯಿಂದ ಕಾವಲುಗಾರ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಶಿಡೇನೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಬ್ಯಾಡಗಿ ಗಾಂಧಿನಗರದ ವಿದ್ಯಾರ್ಥಿ ಹಲ್ಲೆಗೊಳಗಾದವ. ಕಾವಲುಗಾರ ನಾಗರಾಜ ಸುತ್ತಕೋಟಿ ಹಲ್ಲೆ ಮಾಡಿದ ಆರೋಪಿ.
ಗುರುವಾರ ಬೆಳಗ್ಗೆ ವಿದ್ಯಾರ್ಥಿ ಹಣ ಕದ್ದಿರುವುದಾಗಿ ಸಹಪಾಠಿಗಳು ಕಾವಲುಗಾರನಿಗೆ ಹೇಳಿದ್ದರು. ಆಗ ವಿದ್ಯಾರ್ಥಿಯನ್ನು ಕಾವಲುಗಾರ ಪ್ರಶ್ನಿಸಿ ಗದರಿಸಿದ್ದ. ಅದೇ ದಿನ ರಾತ್ರಿ 11.30 ಗಂಟೆ ಸುಮಾರಿಗೆ ಎಲ್ಲ ವಿದ್ಯಾರ್ಥಿಗಳು ನಿದ್ರಾವಸ್ಥೆಯಲ್ಲಿದ್ದಾಗ ಬಾಲಕನ ಬೆನ್ನು, ಕೈ, ತೊಡೆ ಹಾಗೂ ಕಾಲಿನ ಹಿಂಭಾಗಕ್ಕೆ ಕೋಲಿನಿಂದ ಬಾಸುಂಡೆ ಬರುವಂತೆ ಕಾವಲುಗಾರ ಥಳಿಸಿದ್ದಾನೆ. ಅಲ್ಲದೆ, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ನೋವಿನಿಂದ ಬಳಲುತ್ತಿರುವ ವಿಷಯವನ್ನು ಶುಕ್ರವಾರ ಸಂಜೆ ಬಾಲಕ ಮೇಲ್ವಿಚಾರಕರಿಗೆ ತಿಳಿಸಿದ್ದಾನೆ. ರಾತ್ರಿ 8 ಗಂಟೆಗೆ ಮೇಲ್ವಿಚಾರಕರು ಆತನನ್ನು ಆಸ್ಪತ್ರೆಗೆ ದಾಖಲಿಸಿ, ಪಾಲಕರಿಗೆ ವಿಷಯ ತಿಳಿಸಿದ್ದಾರೆ.
ಆಸ್ಪತ್ರೆಗೆ ಬಂದು ತಮ್ಮ ಮಗನ ಸ್ಥಿತಿ ಕಂಡ ಪಟ್ಟಣದ ಪೌರಕಾರ್ವಿುಕ ಚಂದ್ರಪ್ಪ ಗಂಗಮ್ಮನವರ, ವಸತಿ ಶಾಲೆ ಸಿಬ್ಬಂದಿ ಮೇಲೆ ಆಕ್ರೋಶಗೊಂಡು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ನಿರ್ಲಕ್ಷ್ಯ ತೋರಿದ ವಸತಿ ನಿಲಯದ ವಾರ್ಡನ್ ಹಾಗೂ ಪ್ರಾಂಶುಪಾಲರ ಮೇಲೆ ಸೂಕ್ತ ಕ್ರಮ ಜರುಗಿಸಿ, ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಆರೋಪಿ ಕಾವಲುಗಾರ ನಾಗರಾಜ ಸುತ್ತಕೋಟಿಯನ್ನು ಶನಿವಾರ ಬಂಧಿಸಲಾಗಿದೆ.