

ಹೊಳೆನರಸೀಪುರ: ರಾಜ್ಯದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ, ಸಿಬ್ಬಂದಿಗಳಿಗೆ ಹಾಗೂ ಡಿ. ಗ್ರೂಪ್ ನೌಕರರಿಗೆ ಕಾಲಕಾಲಕ್ಕೆ ಸಂಬಳ ನೀಡಲು ಸರ್ಕಾರಕ್ಕೆ ಸಾಧ್ಯ ಆಗುತ್ತಿಲ್ಲ ಹಾಗೂ ಅಗತ್ಯ ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ನೀಡುತ್ತಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಟೀಕಿಸಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ತಾಲೂಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿ, ರಾಜ್ಯದ ಅನೇಕ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾಂಶುಪಾಲರೇ ಕಸ ಗುಡಿಸುವ ಪರಿಸ್ಥಿತಿ ಇದೆ. ಆದರೂ ಸರ್ಕಾರ ಕಾಲೇಜುಗಳಿಗೆ ಯಾವುದೇ ರೀತಿಯ ಅನುದಾನ ನೀಡುತ್ತಿಲ್ಲ. ರಾಜ್ಯದ ಅನೇಕ ಯೂನಿವರ್ಸಿಟಿಗಳಲ್ಲಿ, ಕಾಲೇಜುಗಳಲ್ಲಿ ಕೋಟಿ ಕೋಟಿ ಹಣ ಲೂಟಿ ಆಗುತ್ತಿದೆ. ಇವುಗಳನ್ನು ತನಿಖೆ ನೆಡಿಸಿ ವಶಪಡಿಸಿಕೊಂಡರೆ ರಾಜ್ಯದ ಎಲ್ಲಾ ಕಾಲೇಜುಗಳ ಉಪಾನ್ಯಾಸಕರಿಗೆ ಕಾಲ ಕಾಲಕ್ಕೆ ಸಂಬಳ ಭತ್ಯೆ ನೀಡಬಹುದು. ಈ ವಿಷಯದಲ್ಲಿ ನಾನು ಸುಮ್ಮನೆ ಕೂರುವುದಿಲ್ಲ. ಸರ್ಕಾರ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅಗತ್ಯಕ್ಕೆ ತಕ್ಕಷ್ಟು ಹಣ ಬಿಡುಗಡೆ ಮಾಡದಿದ್ದರೆ ಹೋರಾಟ ಮಾಡುತ್ತೇನೆ. ನನ್ನ 30 ವರ್ಷಗಳ ರಾಜಕೀಯದಲ್ಲಿ ಇಂತಹ ಸರ್ಕಾರವನ್ನು ನಾನು ನೋಡಿರಲಿಲ್ಲ ಎಂದರು.
ಸಭೆಯಲ್ಲಿದ್ದ ಅನೇಕ ಪ್ರಾಂಶುಪಾಲರು ಕಾಲೇಜು ಸೋರುತ್ತಿದೆ, ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ, ಅಗತ್ಯಕ್ಕೆ ತಕ್ಕಷ್ಟು ಕಂಪ್ಯೂಟರ್ ಇಲ್ಲ. ಡೆಸ್ಕ್‌ಗಳಿಲ್ಲ, ಉಪನ್ಯಾಸಕರ ಕೊರತೆ ಕುರಿತು ಅವಲತ್ತುಕೊಂಡರು. ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಇತರರು ಇದ್ದರು.