

* ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಅವ್ಯವಸ್ತೆ
*ಅಧಿಕಾರಿಗಳ ಮೇಲೆ ರೈತರ ಸಿಟ್ಟು ಪ್ರದರ್ಶನ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಏಷ್ಯಾಖಂಡದಲ್ಲಿಯೇ ರಾಮನಗರ ರೇಷ್ಮೆ ಮಾರುಕಟ್ಟೆ ಹೆಸರಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಗೂಡು ತೂಕಕ್ಕೆ ಬುಟ್ಟಿಗಳು ಸಿಗದೆ ರೈತರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.
ರೇಷ್ಮೆಗೂಡು ಹರಾಜಾದ ನಂತರ ತೂಕ ಮಾಡಲು ಬುಟ್ಟಿಗಳು ಬೇಕು. ಆದರೆ, ಇಡೀ ಮಾರುಕಟ್ಟೆಯಲ್ಲಿ ರೈತರ ಅವಶ್ಯಕತೆಗೆ ಬೇಕಿರುವ ಬುಟ್ಟಿಗಳ ಕೊರತೆ ಇದೆ.
ಪ್ರತಿದಿನ ಮಾರುಕಟ್ಟೆಯಲ್ಲಿ ದ್ವಿತಳಿ ಬಿಳಿಗೂಡು, ಮಿಶ್ರತಳಿ ಹಳದಿಗೂಡು ಸೇರಿ ಸುಮಾರು 45 ರಿಂದ 50 ಟನ್ ರೇಷ್ಮೆ ಗೂಡು ಮಾರಾಟವಾಗುತ್ತದೆ. ಸುಮಾರು 700 ರಿಂದ 800 ರೈತರು ರಾಜ್ಯ, ಹೊರ ರಾಜ್ಯದಿಂದ ಗೂಡು ಮಾರಾಟಕ್ಕೆ ಬರುತ್ತಾರೆ. ಮಾರುಕಟ್ಟೆಯಲ್ಲಿ ರೈತರ ಅವಶ್ಯಕತೆಗೆ ಬೇಕಾಗುವಷ್ಟು ಬುಟ್ಟಿ ಒದಗಿಸಿ ರೈತರಿಗೆ ಆಗುತ್ತಿರುವ ಸಮಸ್ಯೆ ಸರಿಪಡಿಸುವಲ್ಲಿ ಅಧಿಕಾರಿಗಳು ಮುಂದಾಗದಿರುವುದು ರೈತರ ಬೇಸರಕ್ಕೆ ಕಾರಣವಾಗಿದೆ.
ಗೂಡು ಹರಾಜಾದ ನಂತರ ತೂಕಕ್ಕೆ ಬುಟ್ಟಿಗಳು ಸಿಗದೆ ರೈತರು ಅಧಿಕಾರಿಗಳ ಮೇಲೆ ಪ್ರತಿದಿನ ಸಿಟ್ಟು ಪ್ರದರ್ಶಿಸುವ ಸನ್ನಿವೇಶ ಸೃಷ್ಟಿಯಾಗಿದೆ. ದಿನನಿತ್ಯ 500ಕ್ಕೂ ಹೆಚ್ಚು ರೈತರು ಬರುತ್ತಾರೆ. ಸರಾಸರಿ ಗೂಡು ತುಂಬಲು 5 ಸಾವಿರಕ್ಕೂ ಹೆಚ್ಚು ಬುಟ್ಟಿಗಳ ಅವಶ್ಯಕತೆ ಇದೆ. ಆದರೆ, ಬೇಡಿಕೆಯಷ್ಟು ಬುಟ್ಟಿ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.
‘ಭಾನುವಾರವೂ ಬುಟ್ಟಿ ಬೇಕೆಂದು ರೇಷ್ಮೆ ಮಾರುಕಟ್ಟೆ ಅಧಿಕಾರಿಗಳ ಮೇಲೆ ಸಿಟ್ಟು ಪ್ರದರ್ಶಿಸಿದ ಚಿತ್ರಣವೂ ಕಂಡುಬಂತು. ಮಾರುಕಟ್ಟೆ ಹಿರಿಯ ಅಧಿಕಾರಿಗಳು ತೂಕ ಆದ ನಂತರ ಬುಟ್ಟಿಗಳನ್ನು ಬೇಗನೆ ಖಾಲಿ ಮಾಡಿಸಿ ಬುಟ್ಟಿಗಳನ್ನು ನೀಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ರೈತರನ್ನು ಸಮಾಧಾನಪಡಿಸಿದರು.
ಬೆಳಗ್ಗೆ 10 ಗಂಟೆಗೆ ಪ್ರಾರಂ‘ವಾಗುವ ಹರಾಜಿಗೆ ರೈತರು ಹಿಂದಿನ ದಿನ ರಾತ್ರಿಯೇ ಜಾಲರಿಯಲ್ಲಿ ಗೂಡು ಹಾಕಿ ಕಾಯಬೇಕು. ಹರಾಜು ಬೆಳಗ್ಗೆ ಮುಗಿದರೂ ಮಧ್ಯಾಹ್ನ 2 ಗಂಟೆವರೆಗೂ ಬುಟ್ಟಿಗಾಗಿ ಕಾಯ್ದು ನಂತರ ತೂಕ ಹಾಕಿಸಿ ಖರೀದಿದಾರರಿಗೆ ಗೂಡು ನೀಡಿ ಪಟ್ಟಿ ಪಡೆದು ರೈತರು ಮಾರುಕಟ್ಟೆಯಿಂದ ಹೋಗಬೇಕಿದೆ. ಇದರಿಂದ ದಿನಗಟ್ಟಲೇ ಮಾರುಕಟ್ಟೆಯಲ್ಲಿ ಬುಟ್ಟಿಗಾಗಿ ಕಾಯಬೇಕು ಎಂಬುದು ರೈತರಿಂದ ಕೆಳಿಬರುವ ಆರೋಪ.
ಮಾರುಕಟ್ಟೆಯಲ್ಲಿ ಸದ್ಯ 2300 ಬುಟ್ಟಿಗಳಿವೆ. 5 ಸಾವಿರ ಬುಟ್ಟಿಗಳ ಅವಶ್ಯಕತೆ ಇದೆ. ಬುಟ್ಟಿ ಕೊರತೆ ನೀಗಿಸಲು ರೇಷ್ಮೆ ನಿರ್ದೇಶಕರು ಖರೀದಿಗೆ ಅನುಮತಿ ನೀಡಿದ್ದಾರೆ. ಇ ಟೆಂಡರ್ ಮೂಲಕ ಖರೀದಿ ಮಾಡಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುತ್ತದೆ. ಭೀಮಪ್ಪ, ಉಪ ನಿರ್ದೇಶಕರು, ರೇಷ್ಮೆ ಗೂಡಿನ ಮಾರುಕಟ್ಟೆ, ರಾಮನಗರ.==ಬೆಳಗ್ಗೆ 10 ಗಂಟೆಗೆ ಗೂಡು ಹರಾಜಾದರೆ ಮಧ್ಯಾಹ್ನದವರೆಗೂ ಬುಟ್ಟಿಗಾಗಿ ಕಾಯಬೇಕು. ಬುಟ್ಟಿ ಬೇಗ ಬೇಕು ಎಂದರೆ ಒಂದು ಬುಟ್ಟಿಗೆ 5 ರೂ. ನೀಡಿ ಪಡೆಯಬೇಕು. ಹಣ ನೀಡದಿದ್ದ ರೈತರಿಗೆ ಬೇಗ ಬುಟ್ಟಿ ಸಿಗುವುದಿಲ್ಲ. ಮಾರುಕಟ್ಟೆಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಸಮಸ್ಯೆ ಕೇಳುವುದಿಲ್ಲ. ಸಮಸ್ಯೆ ಹೇಳಿದರೆ ಇವರ ಮೇಲೆ ಅವರು ಅವರ ಮೇಲೆ ಇವರು ಸಬೂಬು ಹೇಳುತ್ತಾರೆ. ಶಿವಣ್ಣ, ರೈತ ದಾಸೇಗೌಡನದೊಡ್ಡಿ.ಬಹುತೇಕ ಬುಟ್ಟಿಗಳು ಹಾಳಾಗಿವೆ. ಅದರಲ್ಲೇ ಪ್ರಯಾಸಪಟ್ಟು ಗೂಡು ತುಂಬಿ ತೂಕದ ಯಂತ್ರದ ಬಳಿ ಕೊಂಡೊಯ್ಯಬೇಕು. ಜತೆಗೆ ಮಾರುಕಟ್ಟೆಯಲ್ಲಿ ಎಲ್ಲರೂ ಖಾಲಿಯಾದರೂ ರೈತರಿಗೆ ಇಲ್ಲಿನ ಸಿಬ್ಬಂದಿ ಬುಟ್ಟಿ ಕೊಡುವುದಿಲ್ಲ. ರೈತರೇ ಬುಟ್ಟಿ ಹುಡುಕಿ ತರಬೇಕು. ಇದು ಪ್ರತಿದಿನದ ಸಮಸ್ಯೆಯಾಗಿದೆ. ಸೋಮಲಿಂಗಯ್ಯರೈತ, ತುಂಬೇನಹಳ್ಳಿ.