

ಕೆ.ಆರ್.ಪೇಟೆ: ನನ್ನ ದುಡಿಮೆಯ ಮೇಲೆ ನಿಮ್ಮ ಪ್ರೀತಿ, ವಿಶ್ವಾಸ ಗಳಿಸುತ್ತೇನೆ. ಜಿಲ್ಲೆಯ ಜನರ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಅವರು ಪಟ್ಟಣದ ಟಿಬಿ ಬಡಾವಣೆಯ ಪುರಸಭಾ ಮೈದಾನದಲ್ಲಿ ತಾಲೂಕು ಜೆಡಿಎಸ್ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಕೇಂದ್ರ ಸಚಿವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ನನಗೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಜಿಲ್ಲೆಯ ಜನ ಶಕ್ತಿ ನೀಡಿದ್ದಾರೆ. ನಿಮಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಈ ವರ್ಷವಾದರೂ ಜಿಲ್ಲೆಯ ಜನ ಎರಡು ಬೆಳೆ ಭತ್ತ ಬೆಳೆಯುತ್ತಾರೆಂಬ ಆಸೆಯಿದೆ. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಸರ್ವ ಪಕ್ಷದ ಸಭೆಗೆ ನಾನು ಹೋಗಲಿಲ್ಲ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಭಾನುವಾರ ಸಭೆ ಕರೆದು ಹಿಂದಿನ ದಿನ ಶನಿವಾರವೇ ಹತ್ತು ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡುತ್ತಾರೆ. ಸಭೆಗೆ ಮೊದಲು ನೀರು ಬಿಟ್ಟ ಮೇಲೆ ಸಭೆಗೆ ಹೋಗಿ ಸಲಹೆ ಕೊಡುವುದಾದರೂ ಏನು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕೆಲವರು ಕುಮಾರಸ್ವಾಮಿ ಬಾಡೂಟಕ್ಕೆ ಹೋಗಿದ್ದರು ಎಂದು ಟೀಕೆ ಮಾಡುತ್ತಾರೆ. ಶುಭಕಾರ್ಯಗಳಲ್ಲಿ ಬಾಡೂಟ ಹಾಕುವುದು ನಮ್ಮ ಸಮುದಾಯದ ಸಂಸ್ಕೃತಿಯ ಒಂದು ಭಾಗ, ನಮ್ಮ ಶಾಸಕರು ಯಾರನ್ನೂ ಮೆಚ್ಚಿಸಲು ಬಾಡೂಟ ಹಾಕುತ್ತಿಲ್ಲ, ಬದಲಾಗಿ ನಮ್ಮ ಪರಂಪರೆಯ ಒಂದು ಭಾಗವಾಗಿ ಬಾಡೂಟ ಹಾಕುತ್ತಿದ್ದಾರೆ. ಬಾಡೂಟ ನೀವು ನೀಡುವ ಪ್ರೀತಿಗೆ ಕೃತಜ್ಞತೆ ಸಲ್ಲಿಸುವ ಒಂದು ಭಾಗ ಅಷ್ಟಕ್ಕೂ ನಾನು ಆರೋಗ್ಯದ ದೃಷ್ಟಿಯಿಂದ ಕಳೆದ 5-6 ವರ್ಷಗಳಿಂದಲೂ ಬಾಡೂಟದ ಸೇವನೆ ನಿಲ್ಲಿಸಿದ್ದೇನೆ ಎಂದರು.
ಕೆಲವರು ಕುಮಾರಸ್ವಾಮಿ ಅವರು ಕಾವೇರಿ ಪ್ರಾಧಿಕಾರವನ್ನು ಮುಂದಿನ ಐದು ವರ್ಷಗಳಲ್ಲಿ ರದ್ದು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆದು ಅವರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ನನಗೆ ಅವರ ಸೇವೆಯ ಅಗತ್ಯವಿಲ್ಲ. ಈ ಹಿಂದೆಯೇ ಅವರ ಸೇವೆಯನ್ನು ನಾನು ನೋಡಿದ್ದೇನೆ ಎಂದು ಮಾರ್ಮಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾ,ಮಿ ಅವರನ್ನು ಕುಟುಕಿದ ಕುಮಾರಸ್ವಾಮಿ, ನಾನು ಜನರ ಸೇವೆ ಮಾಡುವವನೇ ಹೊರತು ಯಾರಿಂದಲೂ ಸೇವೆ ಮಾಡಿಸಿಕೊಳ್ಳುವವನಲ್ಲ ಎಂದರು.
ನಾನು ಲೋಕಸಭೆಗೆ ನಿಲ್ಲುವ ಇಚ್ಛೆ ಇರಲಿಲ್ಲ, ಆದರೆ ರಾಜಕೀಯ ಪರಿಸ್ಥಿತಿ ನನ್ನನ್ನು ನಿಲ್ಲುವಂತೆ ಮಾಡಿತು. ಜಿಲ್ಲೆಯ ಜನ ಕುಮಾರಸ್ವಾಮಿ ಅವರಿಂದ ಏನಾದರೂ ಅನುಕೂಲವಾಗಬಹುದು ಎಂದು ಪಕ್ಷಾತೀತವಾಗಿ ಮತ ನೀಡಿದ್ದಾರೆ. ಪ್ರಧಾನಿ ನರೇಂದ್ರಮೋದಿ ನನಗೆ ಎರಡು ಮಹತ್ವದ ಖಾತೆಗಳನ್ನು ನೀಡಿದ್ದಾರೆ. ದೇವೇಗೌಡರ 60 ವರ್ಷಗಳ ರಾಜಕೀಯ ಜೀವನಕ್ಕೆ ಒಕ್ಕಲಿಗ ಸಮಾಜ ಶಕ್ತಿಯಾಗಿ ನಿಂತಿದೆ. ಈ ಭಾಗದ ಜನರಿಗೆ ಕೃತಜ್ಞತಾ ಪೂರ್ವಕವಾಗಿ ಮೋದಿ ನನಗೆ ಎರಡು ಪ್ರಮುಖ ಖಾತೆ ನೀಡಿದ್ದಾರೆ. ನನಗೆ ಸಿಕ್ಕಿರುವ ಸಚಿವ ಸ್ಥಾನ ಈ ಭಾಗದ ಜನರಿಗೆ ಮೋದಿ ನೀಡಿದ ಗೌರವವಾಗಿದೆ ಎಂದರು.
ಜಿಲ್ಲೆಯ ಜನ ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟಿದ್ದಾರೆ. ಅವರ ನಿರೀಕ್ಷೆಯನ್ನು ಈಡೇರಿಸಲು ನಾನು ಬದ್ಧ. ಆದರೆ ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ರಾಜ್ಯದ ಪ್ರತಿಷ್ಠಿತ ಭದ್ರಾವತಿ ಮತ್ತು ಉಕ್ಕಿನ ಕಾರ್ಖಾನೆ, ದೇಶದ ಅತ್ಯಂತ ಪ್ರತಿಷ್ಟಿತವಾಗಿದ್ದ ಎಚ್‌ಎಂಟಿ ಕಾರ್ಖಾನೆ ಸ್ಥಗಿತಗೊಂಡಿವೆ. ಅವುಗಳ ಪುನಶ್ಚೇತನಕ್ಕೆ ಈಗಾಗಲೇ ಪ್ರಯತ್ನ ಆರಂಭಿಸಿದ್ದೇನೆ. ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.
ಜನರ ಆಶೀರ್ವಾದದಿಂದ ಜೆಡಿಎಸ್ ಪುನಶ್ಚೇತನವಾಗಿರುವುದು ಕಾಂಗ್ರೆಸ್ಸಿಗರ ನಿದ್ದೆಗೆಡಿಸಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಗುಡ್ಡಗಳು ಕುಸಿದು ಹಲವಾರು ಜನ ಜೀವ ಕಳೆದುಕೊಂಡಿದ್ದಾರೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು, ದೇವೇಗೌಡರು ಮುಖ್ಯಮಂತ್ರಿಯಾದರು, ಸದಾನಂದಗೌಡರು, ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾದರು. ನನಗೂ ಒಂದು ಅವಕಾಶ ಕೊಡಿ. ನನ್ನ ಕೈಗೆ ಒಂದು ಬಾರಿ ಪೆನ್ನು, ಪೇಪರ್ ಕೊಡಿ ಎನ್ನುತ್ತಿದ್ದ ವ್ಯಕ್ತಿ ಇದುವರೆವಿಗೂ ಗುಡ್ಡ ಕುಸಿದವರ ಕಡೆಗೆ ತಿರುಗಿ ನೋಡಿಲ್ಲ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಎಸಿ, ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನೇ ದೋಚುವ ಸರ್ಕಾರ ಅಧಿಕಾರದಲ್ಲಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ.ಹಗರಣ ಆಗಿಲ್ಲ, ಕೇವಲ 94 ಕೋಟಿ ರೂ.ಅವ್ಯವಹಾರ ಆಗಿದೆ ಎಂದು ಸ್ವತಃ ಮುಖ್ಯಮಂತ್ರಿ ಹೇಳುತ್ತಾರೆ. 94 ಕೋಟಿ ರೂ.ಕದ್ದರೆ ಅದು ಕಳ್ಳತನ ಅಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಕಳೆದ 8-9 ತಿಂಗಳಿನಿಂದ ಹಾಲು ಉತ್ಪಾದಕರಿಗೆ ನೀಡಬೇಕಾದ 900 ಕೋಟಿ ರೂ. ಹಣವನ್ನು ರೈತರಿಗೆ ನೀಡಿಲ್ಲ. ಹಾಲು ಖರೀದಿ ದರವನ್ನು ಹೆಚ್ಚಿಸಿದ ಸರ್ಕಾರ ಹಾಲು ಉತ್ಪಾದಕರಿಗೆ ಮಾತ್ರ ಹಾಲಿನ ಹಣ ನೀಡುತ್ತಿಲ್ಲ. ನಮ್ಮ ಕಾಲದಲ್ಲಿ ರೈತರು ಟಿಸಿ ಹಾಕಿಸಿಕೊಳ್ಳಲು 25000 ಸಾಕಾಗಿತ್ತು. ಆದರೆ ಈಗ ಎರಡೂವರೆ ಲಕ್ಷ ರೂ.ಕೊಡಬೇಕಾಗಿದೆ. ಪೆಟ್ರೋಲ್, ಡೀಸೆಲ್, ಬಡವರು ಸೇವಿಸುವ ಮದ್ಯ, ಆಸ್ತಿ ನೊಂದಣಿ ಸೇರಿದಂತೆ ಎಲ್ಲ ಹಂತದಲ್ಲಿಯೂ ಬೆಲೆ ಏರಿಕೆಯಾಗಿದೆ. ಎಷ್ಟು ದಿನ ನೀವು ನಿಮ್ಮ ಗ್ಯಾರಂಟಿ ನೀಡುತ್ತೀರಿ, ಖಜಾನೆ ಖಾಲಿಯಾದ ಮೇಲೆ ನಿಮ್ಮ ಗ್ಯಾರಂಟಿ ಯೋಜನೆಗೆ ಎಲ್ಲಿಂದ ಹಣ ತರುತ್ತೀರಿ. ನಾನು ಸಿಎಂ ಆಗಿದ್ದಾಗ ನಾಡಿನ ತಾಯಂದಿರ ಅಪೇಕ್ಷೆಯ ಮೇರೆಗೆ ಸಾರಾಯಿ ಮತ್ತು ಲಾಟರಿಗಳನ್ನು ನಿಷೇಧೀಸಿದ್ದೆ. ಈಗ ಶಾಸಕರಾಗಿರುವವರು ಮಟ್ಕ, ಜೂಜು ಆಡಿಸಿಕೊಂಡು ಸಮಾಜವನ್ನು ಹಾಳುಮಾಡುತ್ತಿದ್ದಾರೆ. ಜನರ ತೆರಿಗೆಯ ಹಣ ಲೂಟಿಯಾಗುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಆಗುತ್ತಿಲ್ಲ. ಹಣ ಲೂಟಿ ಮಾಡಲು ಸಚಿವರ ನಡುವೆ ಪೈಪೋಟಿ ನಡೆಯುತ್ತಿದೆ ಎಂದರು.