

ನಾಗಮಂಗಲ: ತಾಲೂಕಿನ ಎಲ್ಲ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲವನ್ನು ಜಿಲ್ಲಾ ಸಹಕಾರ ಬ್ಯಾಂಕ್ ಮೂಲಕ ನೀಡಿ ಮಹಿಳೆಯರ ಆರ್ಥಿಕ ಸದೃಢತೆಗೆ ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ನಾಗಮಂಗಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತವಾಗಿ ಮಂಜೂರಾಗಿದ್ದ ಸಾಲದ ಚೆಕ್ ವಿತರಿಸಿ ಮಾತನಾಡಿದರು.
ಮೂರು ತಿಂಗಳೊಳಗೆ ತಾಲೂಕಿಗೆ ಈಗ ನೀಡಿರುವ ಸಾಲ ಸೇರಿದಂತೆ ಒಟ್ಟು 150 ಕೋಟಿ ರೂ.ಗಳಷ್ಟು ಸಾಲವನ್ನು ಸ್ವಸಹಾಯ ಸಂಘಗಳು ಹಾಗೂ ಕೃಷಿಬ ಪತ್ತಿನ ಸಹಕಾರ ಸಂಘಗಳಿಗೆ ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು.
ಬೆಳ್ಳೂರು, ಬಿಂಡಿಗನವಿಲೆ ಸಂಘದ ವ್ಯಾಪ್ತಿಯ ಸ್ವಸಹಾಯ ಸಂಘಗಳು ಹಾಗೂ ನಾಗಮಂಗಲ ಶಾಖೆಗೆ ಸೇರಿದ ಕೆಲವು ಸಂಘಗಳಿಗೆ ಸಾಲದ ಚೆಕ್ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇವಲಾಪುರ, ಹೊಣಕೆರೆ ಹೋಬಳಿಯ ವ್ಯಾಪ್ತಿಯಲ್ಲಿಯೂ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
5 ವರ್ಷದಲ್ಲಿ ಮೂರು ಜನ ಸಿಎಂ ಆಗಿ ರಾಜ್ಯವನ್ನು ಏನು ಮಾಡಿದರು ಎಂಬುದು ನಿಮಗೆ ಗೊತ್ತಿದೆ. ಚುನಾವಣೆಯ ಸಂದರ್ಭಗಳಲ್ಲಿ ನೂರು, ಇನ್ನೂರು ರೂ. ಕೊಡುವವರು ಬೇಕಾ? ಅಥವಾ ವರ್ಷವಿಡೀ ನಿಮ್ಮ ಕುಟುಂಬ ನಿರ್ವಹಣೆ ಆಗುವಂತಹ ಗ್ಯಾರಂಟಿ ಯೋಜನೆಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ಬೇಕಾ ಎಂಬುದನ್ನು ಜನ ಚಿಂತಿಸಬೇಕಿದೆ ಎಂದರು.
ಕೂಡಲೇ ತಾಲೂಕಿನ ವಿವಿಧ ಕಡೆಗಳಲ್ಲಿ ಗಾರ್ಮೆಂಟ್ಸ್ ಸ್ಥಾಪಿಸಲಾಗುವುದು. ಈ ಹಿಂದಿನ ಶಾಸಕರು ಈ ಬಾರಿ ಸೋತಿದ್ದರೂ ಹೋದ ಕಡೆಗಳಲ್ಲಿ ಚಲುವರಾಯಸ್ವಾಮಿಯನ್ನು 50 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದೆ, ಈಗ ಕೇವಲ 4 ಸಾವಿರ ಅಂತರದಲ್ಲಿ ಗೆದ್ದಿರೋದು ಅಂತಾರೆ, ಅವರಿಗೆ ಒಳ್ಳೆಯದಾಗಲಿ ಎಂದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಜೋಗೀಗೌಡ ಮಾತನಾಡಿ, ನಾಗಮಂಗಲ ತಾಲೂಕಿನಲ್ಲಿ ಬರಗಾಲವಿದೆ. ಮಹಿಳೆಯರಿಗೆ ಬಡ್ಡಿ ರಹಿತವಾಗಿ ಸಾಲ ನೀಡಬೇಕು ಎಂದು ನಾಗಮಂಗಲದಿಂದ ಆರಂಭಿಸಿದ್ದೇವೆ. ಕೊಪ್ಪದಲ್ಲಿ 4 ಕೋಟಿ ರೂ.ಸಾಲ ನೀಡಲಾಗಿತ್ತು. 16 ಕೋಟಿ ರೂ.ಸಾಲದ ಹಣವನ್ನು ನಾಗಮಂಗಲಕ್ಕೆ ಬಿಡುಗಡೆ ಮಾಡಲಾಗಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಬೃಹತ್ ಸಾಲಮೇಳವನ್ನು ಬೆಳ್ಳೂರಿನಲ್ಲಿಯೇ ಆಯೋಜಿಸಲಾಗುವುದು ಎಂದರು.
ವಸತಿಗೃಹ ಉದ್ಘಾಟನೆ:
ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿ ಗೃಹಗಳ ಕಟ್ಟಡವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ ಇದ್ದರು.