

ಯಲ್ಲಾಪುರ : ಮೂಲಭೂತ ಸೌಕರ್ಯ ಕಲ್ಪಿಸದ ಕಾರಣ ನೀಡಿ ಪಟ್ಟಣದ ಗಂಗಾಧರ ಕಾಲನಿ ನಿವಾಸಿಗಳು ಮತದಾನ ಬಹಿಷ್ಕಾರದ ನಿರ್ಣಯ ಕೈಗೊಂಡು, ತಹಸೀಲ್ದಾರ ಕಚೇರಿ ಎದುರು ಸೋಮವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಮೂಲಭೂತ ಸೌಕರ್ಯಗಳಾದ ವಿದ್ಯುತ್, ಶೌಚಗೃಹ , ನೀರು ಪೂರೈಕೆಯ ಕುರಿತು ಸಮಸ್ಯೆ ಬಗೆಹರಿಯದಿದ್ದಲ್ಲಿ ಮತದಾನದಿಂದ ದೂರ ಉಳಿಯುವುದಾಗಿ ತಿಂಗಳ ಹಿಂದೆಯೇ ಗಂಗಾಧರ ಕಾಲೋನಿ ನಿವಾಸಿಗಳು ಎಚ್ಚರಿಸಿದ್ದರು. ಆದರೆ, ಸಮಸ್ಯೆ ಬಗೆಹರಿಯದ ಕಾರಣ ಸೋಮವಾರ ರಾತ್ರಿ ಪ್ರತಿಭಟನೆ ನಡೆಸಿದರು. ಸಮಸ್ಯೆ ಬಗೆಹರಿಯದ ಹೊರತು ಮತದಾನ ಮಾಡುವ ಪ್ರಶ್ನೆಯೇ ಇಲ್ಲವೆಂದು ಪಟ್ಟು ಹಿಡಿದರು.
ಗಂಗಾಧರ ಕಾಲೋನಿ ನಿವಾಸಿಗಳ ಮೂಲಭೂತ ಸೌಕರ್ಯಗಳ ಸಮಸ್ಯೆ ಕುರಿತು ಈಗಾಗಲೇ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದು ಚುನಾವಣೆ ಮುಗಿದ ನಂತರ ಮೂಲಭೂತ ಸೌಕರ್ಯಗಳನ್ನು ನೀಡುವ ಭರವಸೆ ನೀಡಿದ್ದಾರೆ. ಮತದಾನ ನಿಮ್ಮ ಹಕ್ಕಾಗಿದ್ದು ಅದನ್ನು ಕಳೆದುಕೊಳ್ಳದೇ ಚಲಾಯಿಸಬೇಕೆಂದು ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ಮನವಿ ಮಾಡಿ, ಮನವೊಲಿಸುವ ಯತ್ನ ನಡೆಸಿದರು.
ಬೇಡಿಕೆ ಈಡೇರದೇ ಇರುವ ಕಾರಣ ಮತದಾನ ಮಾಡುವುದಿಲ್ಲವೆಂದು ಗಂಗಾಧರ ಕಾಲೋನಿ ನಿವಾಸಿಗಳು ಪಟ್ಟು ಹಿಡಿದಿದ್ದು, ಮಂಗಳವಾರ ಯಾವ ನಿರ್ಣಯ ಕೈಗೊಳ್ಳುವರೆಂಬುದನ್ನು ಕಾದು ನೋಡಬೇಕಿದೆ.