

ಸಿಂಧನೂರು: ಸಿಪಿಐಎಂಎಲ್ ರೆಡ್‌ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ಸುಲ್ತಾನಪುರ ಸೀಮೆಯ ಸರ್ವೇ ನಂ.419 ಹಾಗೂ 186ರ ಸರ್ಕಾರಿ ಜಮೀನಿನಲ್ಲಿ ಶನಿವಾರ ಎರಡನೇ ದಿನವು ಅಹೋರಾತ್ರಿ ಧರಣಿ ನಡೆಸಿದ್ದು, ಧರಣಿ ನಿರತರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲಾಧಿಕಾರಿಗಳ ಧರಣಿ ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ಧರಣಿ ನಡೆದಿದೆ. ಧರಣಿಯಲ್ಲಿ ಪಾಲ್ಗೊಂಡಿದ್ದ ಶಾಂತಮ್ಮರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅಂಬ್ಯುಲೆನ್ಸ್‌ನಲ್ಲಿ ಸಿಂಧನೂರಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು.
ಅದರಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆರೋಗ್ಯದಲ್ಲಿ ಏರುಪೇರಾಗಿದ್ದು ಆರ್.ಹೆಚ್.ನಂ.2 ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಪಿಎಂಎಂಎಲ್ ರೆಡ್‌ಸ್ಟಾರ್‌ನ ಎಂ.ಗಂಗಾಧರ, ಜಿ.ಅಮರೇಶ, ಸಂತೋಷ ಹಿರೇದಿನ್ನಿ, ಯಲ್ಲಪ್ಪ ಉಟಕನೂರು, ಶೇಖರಪ್ಪ, ಮಾರುತಿ ಜಿನ್ನಾಪುರ, ಅಂಬಮ್ಮ ಬಸಾಪುರ, ಮಾಬುಸಾಬ ಬೆಳ್ಳಟ್ಟಿ ಇದ್ದರು.