ಮನವೊಲಿಕೆ ಬಳಿಕ ಉಪವಾಸ ಕೈಬಿಟ್ಟ ರೈತರು: ಧರಣಿನಿರತರಿಗೆ ಜ್ಯೂಸ್ ಕುಡಿಸಿದ ಜಿಲ್ಲಾಧಿಕಾರಿ

Mandya
Published on
ಮಂಡ್ಯ: ಪ್ರತಿ ಟನ್ ಕಬ್ಬಿಗೆ ೪೫೦೦ ರೂ ಮತ್ತು ಪ್ರತಿ ಲೀಟರ್ ಹಾಲಿಗೆ 40 ರೂ ನಿಗದಿಪಡಿಸುವಂತೆ ಆಗ್ರಹಿಸಿ ನಗರದಲ್ಲಿ ಫೆ.೧೫ರಿಂದ ರೈತಸಂಘದ ಕಾರ್ಯಕರ್ತರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸೋಮವಾರ ರಾತ್ರಿ ಕೈಬಿಟ್ಟರು. ಆದರೆ ಅಹೋರಾತ್ರಿ ಧರಣಿ ಮುಂದುವರೆಸಲಾಯಿತು. 
ಕಬ್ಬು ಮತ್ತು ಹಾಲಿನ ದರ ನಿಗದಿಗೆ ಒತ್ತಾಯಿಸಿ ರೈತಸಂಘದಿಂದ 2022 ನ.7ರಿಂದ ಅಹೋರಾತ್ರಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಹೋರಾಟವು ಫೆ.14ರಂದು ಶತದಿನ ಪೂರೈಸಿದರೂ ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಫೆ.15ರಿಂದ ಐವರು ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಈ ಪೈಕಿ ಇಬ್ಬರು ಶನಿವಾರ ಅಸ್ವಸ್ಥಗೊಂಡು ಆಸ್ಪತ್ರೆಗೂ ದಾಖಲಾಗಿದ್ದರು. ಸ್ವಲ್ಪ ಗುಣಮುಖರಾದ ಬಳಿಕ ಮತ್ತೆ ಧರಣಿ ಸ್ಥಳಕ್ಕೆ ಆಗಮಿಸಿ, ಸತ್ಯಾಗ್ರಹ ಮುಂದುವರೆಸಿದ್ದರು. ಆದರೆ, ಉಪವಾಸ ನಿರತ ಮಲ್ಲನಾಯಕನಕಟ್ಟೆ ವಿಜಯಕುಮಾರ್, ಭೂತನಹೊಸೂರು ಸಂತೋಷ್, ವಿನೋದ್‌ಬಾಬು, ಜಿ.ಮಲ್ಲಿಗೆರೆ ಅಣ್ಣಯ್ಯ, ಗೂಳೂರು ರಾಮಕೃಷ್ಣ ಅವರ ಆರೋಗ್ಯದಲ್ಲಿ ಸೋಮವಾರ ಸ್ವಲ್ಪ ಏರುಪೇರಾಗಿತ್ತು.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣೇಗೌಡ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿಎಚ್‌ಒ ಡಾ.ಟಿ.ಎನ್.ಧನಂಜಯ, ತಹಸೀಲ್ದಾರ್ ಕುಂಞ ಅಹಮ್ಮದ್ ಅವರು ಸೋಮವಾರ ಸಂಜೆ ಧರಣಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆರೋಗ್ಯದಲ್ಲಿ ಏರುಪೇರಾಗಿದೆ. ಆರೋಗ್ಯದ ದೃಷ್ಟಿಯಿಂದ ದಯವಿಟ್ಟು ಉಪವಾಸ ಕೈಬಿಡಿ. ಮುಖ್ಯಮಂತ್ರಿಯವರು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ. ನೀವು ಹೋರಾಟ ಮುಂದುವರೆಸಲು ಯಾವುದೇ ಅಡ್ಡಿಯಿಲ್ಲ ಎಂದು ಮನವಿ ಮಾಡಿದರು. ಸುದೀರ್ಘ ಮಾತುಕತೆ ಬಳಿಕ ಪ್ರತಿಭಟನಾಕಾರರ ಮನವೊಲಿಸಿ, ಅವರಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರು ಸ್ವತಃ ಜ್ಯೂಸ್ ಕುಡಿಸಿದರು. ಇದರೊಂದಿಗೆ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿತು. 
ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net