

ವಿರಾಜಪೇಟೆ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಬುಧವಾರ ವಿರಾಜಪೇಟೆಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ವಿರಾಜಪೇಟೆಯ ಕಾರು ನಿಲ್ದಾಣದಲ್ಲಿ ಮುಷ್ಕರ ನಡೆಸಲಾಯಿತು.
ಮುಷ್ಕರನಿರತರು ವಿರಾಜಪೇಟೆಯ ಮಾರಿಯಮ್ಮ ದೇಗುಲದ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಕಾರು ನಿಲ್ದಾಣದಲ್ಲಿ ಜಮಾವಣೆಗೊಂಡರು.
ಈ ವೇಳೆ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳಿಗೆ ವಿರುದ್ಧವಾಗಿ ಕಾನೂನುಗಳನ್ನು ಜಾರಿಗೆ ತಂದಿದೆ. ಬೆಲೆ ಏರಿಕೆಯಿಂದ ಕಾರ್ಮಿಕರ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ. ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆ ಬದಲಿಗೆ 12 ಗಂಟೆ ದುಡಿಯುವಂತೆ ಕಾನೂನು ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರ ಶ್ರೇಯಸ್ಸು ಕಾಯುವ ಬದಲು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭ ತರುವಂತಿದೆ. ದುಡಿಮೆಯ ಹಣವು ಅಭಿವೃದ್ದಿ ಹೆಸರಲ್ಲಿ ಕಾರ್ಪೊರೇಟ್ ಸಂಸ್ಥೆಯ ಮಡಿಲಿಗೆ ಸೇರುತ್ತಿದೆ ಎಂದು ಕಿಡಿಕಾರಿದರು.
ಸಂಘಟನೆಯ ಪ್ರಮುಖ ಡಾ.ದುರ್ಗಾ ಪ್ರಸಾದ್ ಮಾತನಾಡಿ, ಎಂಟು ಗಂಟೆ ಕೆಲಸದ ಅವಧಿ, ಕಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದು ಪಡಿಸಬೇಕು. ಬೆಲೆಗಳಿಗೆ ಅನುಗುಣವಾಗಿ ಎಲ್ಲ ಸಂಘಟಿತ ಅಸಂಘಟಿತ ಗುತ್ತಿಗೆ ಕಾರ್ಮಿಕರು ರಾಷ್ಟ್ರವ್ಯಾಪಿ 26 ಸಾವಿರ ಹಾಗೂ ರಾಜ್ಯವ್ಯಾಪಿ ಮೂವತ್ತಾರು ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಕಟ್ಟಡ ಕಾರ್ಮಿಕರು, ಆಟೋ ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು ಸೇರಿದಂತೆ ಇನ್ನಿತರ ಎಲ್ಲ ಅಸಂಘಟಿತ ಕಾರ್ಮಿಕರ ಮತ್ತು ಕೃಷಿ ತೋಟ ಕಾರ್ಮಿಕರು ಸೇರಿದಂತೆ ಎಲ್ಲ ವಿಭಾಗದ ಕಾರ್ಮಿಕರಿಗೆ ಕನಿಷ್ಠ ಮಾಸಿಕ 9000 ರೂ. ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದರು.
ವಕೀಲ ಸುನೀಲ್ ಮತ್ತು ಮಣಿ, ಸಿಐಟಿಯು ಸಂಘಟನೆಯ ಪದಾಧಿಕಾರಿಗಳಾದ ಎನ್.ಡಿ.ಕುಟ್ಟಪ್ಪ, ಎ.ಮಹಾದೇವ, ಶಾಜಿ ರಮೇಶ್, ಪುಷ್ಪಾ, ಹರಿದಾಸ್, ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷೆ ಸುಮಿತ್ರಾ, ವಿರಾಜಪೇಟೆ ತಾಲೂಕು ಅಧ್ಯಕ್ಷೆ ಶೀಲಾ, ಬಿಸಿಯೂಟ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕುಸುಮಾ, ಜಯಂತಿ, ನ್ಯಾನ್ಸಿ, ಜನರಲ್ ವಕರ್ಸ್ ಯೂನಿಯನ್ ಜಿಲ್ಲಾ ಅಧ್ಯಕ್ಷರಾದ ಎಚ್.ಬಿ.ರಮೇಶ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್, ಎಲ್‌ಐಸಿ ಮತ್ತು ಆಸ್ಪತ್ರೆ ಸಿಬ್ಬಂದಿ, ನೌಕರರ ಸಂಘಟನೆ ಪದಾಧಿಕಾರಿಗಳು ಇದ್ದರು.