

ಕಾರವಾರ Strike: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಿವಿಧೆಡೆ ರಾತ್ರಿ ವಿದ್ಯುದ್ದೀಪಗಳನ್ನು ಬೆಳಗಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಐಆರ್‌ಬಿ ಕಂಪನಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಳಿ ಸೇತುವೆಯ ಮೇಲೆ, ಸದಾಶಿವಗಡ ಸೇರಿ ವಿವಿಧೆಡೆ ವಿದ್ಯುತ್ ದೀಪಗಳಿಲ್ಲ. ರಾತ್ರಿ ಜಾನುವಾರುಗಳು ಮಲಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಇನ್ನು ಏಳು ದಿನಗಳಲ್ಲಿ ದೀಪ ಅಳವಡಿಸುವಂತೆ ಎನ್‌ಎಚ್‌ಎಐ ಹಾಗೂ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಇಲ್ಲದಿದ್ದಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಯಲಾಗುವುದು ಎಂದು ಎಚ್ಚರಿಸಿದರು. . ಕರವೇ ಜಿಲ್ಲಾಧ್ಯಕ್ಷ ಅಕ್ಷಯ ಎಸ್.ಬಿ., ರೋಶನ್ ನಾಯ್ಕ, ಮಹೇಶ ಬಾಂದೇಕರ್, ವೀರಭದ್ರ, ಬ್ರಿಜೇಶ ನಾಯ್ಕ, ಪ್ರಶಾಂತ ಗಡ್ಕರ್, ಪ್ರಶಾಂತ ರಾಯ್ಕರ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.