ಸುಸಜ್ಜಿತ ಆಸ್ಪತ್ರೆಯ ಕೂಗು ಮತ್ತೊಮ್ಮೆ ಅನುರಣನ

Strike for hospital
Published on

ಕಾರವಾರ: ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಆಗ್ರಹಿಸಿ ಶಿರಸಿಯ ಅನಂತಮೂರ್ತಿ ಹೆಗಡೆ ಟ್ರಸ್ಟ್ ಕೈಗೊಂಡಿದ್ದ ಪಾದಯಾತ್ರೆ ಗುರುವಾರ ಕಾರವಾರ ತಲುಪಿತು.
ನ.2 ರಿಂದ ಶಿರಸಿ ಮಾರಿಕಾಂಬಾ ದೇವಸ್ಥಾನದಿಂದ ಹೊರಟ ಪಾದಯಾತ್ರೆ ಕುಮಟಾ, ಅಂಕೋಲಾ ಮಾರ್ಗವಾಗಿ 130 ಕಿಮೀ ಸಾಗಿ ಬಂದಿದೆ. ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ , ಅಂಕೋಲಾದಲ್ಲಿ ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಆಗಮಿಸಿ ಪಾದಯಾತ್ರೆಯ ಉದ್ದೇಶವನ್ನು ಶ್ಲಾಘಿಸಿದರು.  ನಡುವೆ ಸುಮಾರು 20 ಕ್ಕೂ ಅಧಿಕ ಸಂಘಟನೆಗಳ ಪ್ರಮುಖರು  ಪಾದಯಾತ್ರೆಯನ್ನು ಬೆಂಬಲಿಸಿ ಅನಂತಮೂರ್ತಿ ಅವರ ಜತೆ ಹೆಜ್ಜೆ ಹಾಕಿದರು.  ಸಾವಿರಾರು ಜನ ಹೋರಾಟದಲ್ಲಿ ಭಾಗಿಯಾದರು. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮತ್ತೊಮ್ಮೆ‌ ಆಸ್ಪತ್ರೆಯ ಕೂಗು ಹೆಚ್ಚಿದೆ.

ಜಿಲ್ಲಾಧಿಕಾರಿ ಕಚೇರಿಯ ಎದುರು ಸಾರ್ವಜನಿಕ ನಡೆಸಿ, ಪಾದಯಾತ್ರೆಯ ಉದ್ದೇಶ ಹಾಗೂ ಬೇಡಿಕೆಗಳನ್ನು ಮಂಡಿಸಿ, ನಂತರ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರಿಗೆ ಮನವಿ ಪತ್ರವನ್ನು ಹಸ್ತಾಂತರಿಸಲಾಯಿತು.
ಅನಂತಮೂರ್ತಿ ಹೆಗಡೆ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಹಿಂದೆ ಸಾಕಷ್ಟು ವರ್ಷ ಕೈಗಾರಿಕಾ ಸಚಿವರಾಗಿದ್ದ ಜಿಲ್ಲೆಯ ಜನಪ್ರತಿನಿಽಯೊಬ್ಬರು ಜಿಲ್ಲೆಗೆ ಒಂದೂ ಕೈಗಾರಿಕೆ ತಂದಿಲ್ಲ. ಕರೊನಾ ಬಂದ ನಂತರ ದೃದಯಾಘಾತಗಳ ಸಂಖ್ಯೆ ಹೆಚ್ಚಿದೆ. ಜಿಲ್ಲೆಯ ಯಾವುದೇ ತಾಲೂಕಿನ ಜನರಿಗೆ ಗಂಭೀರ ಅನಾರೋಗ್ಯ ಸಮಸ್ಯೆ ಎದುರಾದರೆ ಕನಿಷ್ಠ 200 ಕಿಮೀ ತೆರಳಬೇಕಾದ ದುಸ್ಥಿತಿ ಇದೆ.
ಉಡುಪಿಯಲ್ಲಿ, ಮಂಗಳೂರಿನಲ್ಲಿ ಆಗುವ ಆಸ್ಪತ್ರೆ ಉತ್ತರ ಕನ್ನಡದಲ್ಲೇಕೆ ಆಗುವುದಿಲ್ಲ. ನಮಗೆ ಸೌಲಭ್ಯ ಬೇಕು ಎಂದು ಪಟ್ಟು ಹಿಡಿಯುವವರೆಗೂ ಸರ್ಕಾರ ಅದಕ್ಕೆ ಸ್ಪಂದಿಸದು.  ನಾವು ಎಲ್ಲಿಯವರೆಗೆ ಆಸ್ಪತ್ರೆಯಾಗುವುದಿಲ್ಲವೋ ಅಲ್ಲಿಯವರೆಗೆ ಹೋರಾಟ ಮಾಡುತ್ತೇವೆ ಎಂದು ಶಪಥ ಮಾಡೋಣ. ಉತ್ತರ ಕನ್ನಡ ಧೀರರ ನಾಡು, ಶೂರರ ನಾಡು, ಪದ್ಮಶ್ರೀ ಪುರಸ್ಕೃತರಿದ್ದಾರೆ. ಆದರೆ, ಅವರಿಗೇ ಅನಾರೋಗ್ಯಕ್ಕೊಳಗಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಹಾಗಾಗಿ ಜಿಲ್ಲೆಯ ಕರಾವಳಿಯಲ್ಲಿ ಒಂದು ಹಾಗೂ ಘಟ್ಟದ ಮೇಲೊಂದು ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಒತ್ತಾಯ ಎಂದರು.
ಸೇಂಟ್ ಮಿಲಾಗ್ರಿಸ್ ಬ್ಯಾಂಕ್‌ನ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಮಾತನಾಡಿ, ಆಸ್ಪತ್ರೆ ಸ್ಥಾಪಿಸಿ ಸಾವು ನಿಲ್ಲಿಸಿ ಎಂದು ಒತ್ತಾಯಿಸಿದರು. ಆರ್.ಜಿ.ನಾಯ್ಕ ಮಾತನಾಡಿ, ಜಿಲ್ಲೆಯ ರಾಜಕೀಯ ವ್ಯವಸ್ಥೆ ನಿಷ್ಕ್ರಿಯ. ಜನರ ಪರವಾದ ಹೋರಾಟಕ್ಕೆ ಹೆಚ್ಚಿನ ಶಾಸಕರು, ಮಾಜಿ ಶಾಸಕರು ಬೆಂಬಲ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೆಗಡೆಯಲ್ಲಿ ಪಂಜರ‌ ಬಂಧಿಯಾದ ಚಿರತೆ
ರಾಘು ನಾಯ್ಕ ಮಾತನಾಡಿ, ಸರ್ಕಾರಿ ಮೆಡಿಕಲ್ ಕಾಲೇಜ್ ಕಾರವಾರದಲ್ಲಿ ನಿರ್ಮಾಣವಾದರೂ. ಅದು ಕೆಲವು ಧನ ದಾಹಿಗಳ ಕೇಂದ್ರವಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಹಿಂದೆ ರಕ್ತದಲ್ಲಿ ಪತ್ರಬರೆದಿದ್ದೆವು. ಮುಂದೆಯೂ ಹೋರಾಟಕ್ಕೆ ಬದ್ಧ ಎಂದರು. ಡಾ.ವೆಂಕಟೇಶ ನಾಯ್ಕ, ಸುನೀಲ ಸೋನಿ, ಪ್ರೀತಮ್ ಮಾಸೂರಕರ್, ಎಸ್. ಫಕೀರಪ್ಪ, ಉಮೇಶ ಹರಿಕಾಂತ, ಶಿವರಾಜ ಮೇಸ್ತ, ಪರಮಾನಂದ ಹೆಗಡೆ, ಸುಬ್ರಾಯ ಹೆಗಡೆ ಇತರರು ಮಾತನಾಡಿದರು.

ಕಾಶ್ಮೀರಕ್ಕೆ ತೆರಳಿದ ಮಾಜಿ ಸಚಿವ
ಉತ್ತರ ಕನ್ನಡ ಅಡುಗೆ ಅನಿಲ ವಿತರಕರ ಸಂಘದ ಬಸವರಾಜ ಓಶಿಮಠ ಮಾತನಾಡಿ, ಜಿಲ್ಲೆಗೆ ಬರಗಾಲ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳಿಲ್ಲ. ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಜಿಲ್ಲೆಯ ಮಾಜಿ ಸಚಿವರೊಬ್ಬರು ಕಾಶ್ಮೀರಕ್ಕೆ ಮೋಜು ಮಾಡಲು ತೆರಳಿದ್ದಾರೆ. ಅವರು ತುಂಬುವ ಇನ್‌ಕಮ್ ಟ್ಯಾಕ್ಸ್ ದುಡ್ಡಿನಲ್ಲಿ ಎರಡು ಆಸ್ಪತ್ರೆ ಕಟ್ಟಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net