

ಚನ್ನರಾಯಪಟ್ಟಣ: ಸಾರ್ವಜನಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ವಿಳಂಬವಿಲ್ಲದೆ ತಲುಪಿಸಬೇಕಾಗಿರುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಕರ್ತವ್ಯ. ಆದರೆ, ಅಧಿಕಾರಿಗಳ ವಿರುದ್ಧ ದೂರು ಬಂದರೆ ಲೋಕಾಯುಕ್ತ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಲೋಕಾಯುಕ್ತ ಎಸ್‌ಪಿ ಮಲ್ಲಿಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕ ಕುಂದುಕೊರತೆ ಸಭೆಯ ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಂದಾಯ ಇಲಾಖೆಯ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸರ್ವೇ ಮಾಡಿಸುವ ವಿಚಾರದಲ್ಲಿಯೂ ದೂರುಗಳಿವೆ. ಮೂಲ ದಾಖಲೆಗಳನ್ನು ಇಟ್ಟುಕೊಂಡು ಕೆಲಸ ಮಾಡಿಕೊಡಬಹುದು. ಸಣ್ಣಪುಟ್ಟ ಲೋಪಗಳಿದ್ದರೆ ಅರ್ಜಿದಾರರಿಗೆ ತಿಳಿವಳಿಕೆ ನೀಡಿ ಅವರಿಗೆ ಸಹಾಯ ಮಾಡಬೇಕು ಎಂದು ಸೂಚಿಸಿದರು.
ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ತಹಸೀಲ್ದಾರ್ ಕಚೇರಿಗೆ ಸಂಬಂಧಿಸಿದಂತೆ ಒಟ್ಟು 20 ದೂರುಗಳನ್ನು ಸ್ವೀಕರಿಸಲಾಗಿದೆ. 4 ಅರ್ಜಿಗಳನ್ನು ಸ್ಥಳದಲ್ಲಿ ವಿಲೇವಾರಿ ಮಾಡಿದ್ದು, ಉಳಿದ ಅರ್ಜಿಗಳನ್ನು ಅಧಿಕಾರಿಗಳಿಗೆ ಕಳಿಸಿದ ಹದಿನೈದು ದಿನಗಳೊಳಗೆ ಸಮಸ್ಯೆ ಬಗೆಹರಿಸಬೇಕು, ಸಮಸ್ಯೆಗೆ ಪರಿಹಾರ ಸಿಗದೆ ಇದ್ದಲ್ಲಿ ಉಂಟಾದ ಕಾನೂನು ತೊಡಕುಗಳನ್ನು ವಿವರಿಸಬೇಕು ಎಂದು ತಿಳಿಸಿದರು.
ಇನ್‌ಸ್ಪೆಕ್ಟರ್‌ಗಳಾದ ಶಿಲ್ಪಾ, ಎಚ್.ಎನ್.ಬಾಲು, ತಹಸೀಲ್ದಾರ್ ಬಿ.ಎಂ.ಗೋವಿಂದರಾಜು, ಪುರಸಭಾ ಮುಖ್ಯಾಧಿಕಾರಿ ಕೆ.ಎನ್.ಹೇಮಂತಕುಮಾರ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎನ್.ಗಿರೀಶ್, ವಿವಿಧ ಇಲಾಖೆಯ ಮುಖ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.