ಹೊರವಲಯದಲ್ಲಿ ತ್ಯಾಜ್ಯ ಬಿಸಾಕಿದರೆ ಕಠಿಣ ಕ್ರಮ

dumped
Published on

ಬೆಂಗಳೂರು: ನಗರದ ಹೊರವಲಯದಲ್ಲಿ ಕಾನೂನುಬಾಹಿರವಾಗಿ ಅನಧಿಕೃತ ವ್ಯಕ್ತಿಗಳಿಂದ, ಏಜೆನ್ಸಿಗಳಿಂದ ಕಟ್ಟಡ ಮತ್ತು ಭಗ್ನಾವಶೇಷ ವಿಲೇವಾರಿ ಮಾಡಿದರೆ ಕಠಿಣ ಕ್ರಮದ ಜತೆಗೆ ದಂಡ ವಿಧಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಪಾಲಿಕೆ ವ್ಯಾಪ್ತಿಯ ಹೊರಗಡೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬದಿಗಳಲ್ಲಿ, ಇಕ್ಕೆಲಗಳಲ್ಲಿ ಅನಧಿಕೃತ ವ್ಯಕ್ತಿಗಳಿಂದ, ಏಜೆನ್ಸಿಗಳಿಂದ ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರವೃತ್ತಿ ನಗರಕ್ಕೆ ಸಂಚರಿಸುವ ಸಾರ್ವಜನಿಕರಲ್ಲಿ ಬೆಂಗಳೂರು ನಗರದ ಸ್ವಚ್ಛತೆ ಕುರಿತು ಋಣಾತ್ಮಕ ಮನೋಭಾವನೆ ಉಂಟುಮಾಡುವುದಲ್ಲದೆ ನಗರದ ಘನತೆ ಕುಂದುತ್ತಿದೆ. ಹೀಗಾಗಿ, ತ್ಯಾಜ್ಯ ನಿರ್ವಹಣೆ ಕುರಿತು ಉತ್ಪಾದಕರು, ಸಂಗ್ರಹದಾರರು, ಸಾಗಣೆದಾರರು, ವಿಲೇವಾರಿದಾರರು ಮತ್ತು ಸಾರ್ವಜನಿಕರು ಕೆಲ ನಿಯಮ ಪಾಲಿಸುವಂತೆ ಪಾಲಿಕೆ ಆದೇಶಿಸಿದೆ.

ಕಟ್ಟಡ, ಭಗ್ನಾವಶೇಷ ತ್ಯಾಜ್ಯದ ವೈಜ್ಞಾನಿಕ ಅಧಿಕೃತ ಸಂಗ್ರಹಣೆ, ಸಾಗಾಣೆ ಮತ್ತು ವಿಲೇವಾರಿಯ ಪ್ರಾಥಮಿಕ ಜವಾಬ್ದಾರಿಯು ತ್ಯಾಜ್ಯ ಉತ್ಪಾದಕರದ್ದು. ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಅಧಿಕೃತವಾಗಿ ಗುರುತಿಸಿದ ಸಂಸ್ಕರಣಾ ಘಟಕಗಳಿಗೆ ಸಾಗಿಸಿ ವಿಲೇವಾರಿ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳ ಬದಿಯಲ್ಲಿ ಇಕ್ಕೆಲಗಳಲ್ಲಿ, ಚರಂಡಿಗಳಲ್ಲಿ, ಖಾಲಿ ನಿವೇಶನಗಳಲ್ಲಿ ಅಥವಾ ಕ್ವಾರಿಗಳಲ್ಲಿ ಸುರಿಯುವುದನ್ನು ನಿಷೇಧಿಸಲಾಗಿದ್ದು, ದಂಡಾರ್ಹ ಮತ್ತು ಕಾನೂನಾತ್ಮಕವಾಗಿ ಅಪರಾಧವಾಗಿದೆ. ಹೀಗಾಗಿ, ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಮಾಡಿದರೆ ಪ್ರತಿ ಟನ್‌ಗೆ 10 ಸಾವಿರ ರೂ.ನಂತೆ ದಂಡ ವಿಧಿಸುವುದಾಗಿ ಪಾಲಿಕೆ ತಿಳಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೂಪರವೈಸರ್, ಕಿರಿಯ ಆರೋಗ್ಯ ಪರಿವೀಕ್ಷಕರು, ವಾರ್ಡ್ ಮಾರ್ಷಲ್ಸ್‌ಗಳ ಮುಖೇನ ತಪಾಸಣೆಗೆ ಒಳಪಡಿಸಬೇಕು. ನಿಯಮ ಉಲ್ಲಂಸುವವರಿಗೆ ದಂಡ ವಿಧಿಸಿ ವಾಹನಗಳನ್ನು ಜಪ್ತಿ ಮಾಡಿ ಸಮೀಪದ ಪೊಲೀಸ್ ಠಾಣೆ ಸುಪರ್ದಿಗೆ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಬಿಎಂಪಿ ತಾಕೀತು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net