ಸಾಕುಪ್ರಾಣಿಗಳನ್ನು ರಸ್ತೆಗೆ ಬಿಟ್ಟರೆ ಕಠಿಣ ಕ್ರಮ

25blrp1
Published on

ಬೇಲೂರು: ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡುತ್ತಿರುವುದರಿಂದ ಅವುಗಳು ರಸ್ತೆ ಮಧ್ಯೆ ಸೇರಿದಂತೆ ಎಲ್ಲೆಂದರಲ್ಲಿ ಮಲಗುವುದರಿಂದ ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದ್ದು, ಅವುಗಳನ್ನು ಪುನಃ ರಸ್ತೆಗೆ ಬಿಟ್ಟರೆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಎಚ್ಚರಿಸಿದರು.


ಪಟ್ಟಣದಲ್ಲಿ ಶನಿವಾರ ಮುಖ್ಯರಸ್ತೆ ಸೇರಿದಂತೆ ವಿವಿಧೆಡೆ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಅಡ್ಡಿಯುಂಟು ಮಾಡುತ್ತಿದ್ದ ಜಾನುವಾರುಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ದಂಡ ವಿಧಿಸಿ ಹಸ್ತಾಂತರಿಸಿ ಮಾತನಾಡಿದ ಅವರು, ನಾನು ಅಧ್ಯಕ್ಷನಾದ ನಂತರ ಮೊದಲ ಬಾರಿಗೆ ಇದು ಆಗಿರುವುದರಿಂದ ದಂಡ ಕಟ್ಟಿಸಿಕೊಂಡು ಮಾಲೀಕರಿಗೆ ಜಾನುವಾರುಗಳನ್ನು ಬಿಟ್ಟು ಕೊಡುತ್ತಿದ್ದೇವೆ. ಇದು ಮತ್ತೆ ಪುನರಾವರ್ತನೆಯಾದರೆ ಜಾನುವಾರುಗಳನ್ನು ಗೋ ಶಾಲೆಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದ ಅವರು, ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿರುವುದರಿಂದ ಟ್ರಾಫಿಕ್ ಕಿರಿಕಿರಿಯಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಅಡ್ಡಬಂದು ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಆದ್ದರಿಂದ ಬಿಡಾಡಿ ಜಾನುವಾರುಗಳನ್ನು ನಮ್ಮ ಸಿಬ್ಬಂದಿ ಹಿಡಿದು ಮಾಲೀಕರಿಗೆ ಎಚ್ಚರಿಕೆ ನೀಡಿದ್ದಲ್ಲದೆ ದಂಡ ವಿಧಿಸಿ ಕಳುಹಿಸಿದ್ದೇವೆ. ಮತ್ತೆ ಇದು ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.


ಆರೋಗ್ಯಾಧಿಕಾರಿ ಲೋಹಿತ್, ಮುಖಂಡರಾದ ವೆಂಕಟೇಶ್, ಮಹೇಶ್, ಜಾನುವಾರು ಮಾಲೀಕ ಮುಜಮಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net