ಸ್ತ್ರೀ ಸಬಲೀಕರಣದ ಆಶಯಕ್ಕೆ ಬಲ ತುಂಬಿ

8KMD-1
ಅಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಮಹಿಳಾಸ್ನೇಹಿ ಗ್ರಾಮಪಂಚಾಯತ್ ಅಭಿಯಾನ ಕಾರ್ಯಕ್ರಮವನ್ನು ಮಹಿಳೆಯರು ಉದ್ಘಾಟಿಸಿದರು. ಅಶ್ವಿನಿ, ಕೆ.ಎಂ.ರೇಖಾ, ಶಿವಮ್ಮ ಮತ್ತಿತರರಿದ್ದರು.
Published on

ಕೆ.ಎಂ.ದೊಡ್ಡಿ; ಸ್ಥಳೀಯ ಆಡಳಿತದಲ್ಲಿ ಮಹಿಳೆಯರು ಭಾಗವಹಿಸಿ ಅಭಿಪ್ರಾಯ ನೀಡುವ ಮೂಲಕ ಮಹಿಳಾ ಸಬಲೀಕರಣದ ಆಶಯಕ್ಕೆ ಬಲ ತುಂಬಬೇಕು ಎಂದು ಅಣ್ಣೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ತಿಳಿಸಿದರು.

ಸಮೀಪದ ಅಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಮಹಿಳಾಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಇರುವ ತೊಡಕುಗಳನ್ನು ಗುರುತಿಸಿ ಹೊಗಲಾಡಿಸುವ ಮೂಲಕ ವಾರ್ಡ್ ಮತ್ತು ಗ್ರಾಮಸಭೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಒತ್ತು ನೀಡಲಾಗುವುದು ಎಂದರು.

ಮಹಿಳಾಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವು ಹದಿನಾರು ವಾರಗಳ ಕಾಲ ನಡೆಯಲಿದ್ದು, ವಿವಿಧ ದಿನಾಚರಣೆಗಳು ಹಾಗು ಆರೋಗ್ಯ ತಪಾಸಣೆ ಮತ್ತು ಯೋಗ ಶಿಬಿರಗಳು ನಡೆಯಲಿವೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.

ಸರ್ಕಾರದ ಯೊಜನೆಗಳ ಕುರಿತು ಮಾಹಿತಿ ನೀಡುವ ಜತೆಗೆ ಅರ್ಹ ಫಲಾನುಭವಿಗಳಿಗೆ ಯೋಜನೆಯ ಫಲ ವಿತರಿಸಲು ಅಭಿಯಾನದಲ್ಲಿ ಕ್ರಮವಹಿಸಲಾಗುವುದು. ಸ್ಥಳೀಯಾಡಳಿದಲ್ಲಿ ಜನಸಂಖ್ಯೆ ಅಧರ್ದಷ್ಟಿರುವ ಮಹಿಳೆಯರ ಅಭಿಪ್ರಾಯ ದಾಖಲಾದಾಗ ಮಾತ್ರ ಮಹಿಳೆಯರ ಸಬಲೀಕರಣವಾಗಲಿದೆ ಎಂದರು.

ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ನಡೆಸುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಉಪ ಸಮಿತಿಗಳ ಸಭೆಗಳನ್ನು ನಡೆಸಲಾಗುವುದು. ಗ್ರಾಮದ ಮಹಿಳೆಯರ ಅಂಕಿ-ಸಂಖ್ಯೆಯ ವಿವರಗಳನ್ನು ಸಂಗ್ರಹಿಸಿ ಮಹಿಳಾ ಗ್ರಾಮಸಭೆಯಲ್ಲಿ ಮಂಡಿಸಬೇಕು ಎಂದರು.

ಮದ್ದೂರಿನ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಮುಂದೆ ಬರುತ್ತಿರುವಂತೆಯೇ ಸಾಮಾಜಿಕ ಹಾಗೂ ರಾಜಕೀಯಾವಾಗಿಯೂ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.

ಗ್ರಾಮಸಭೆಯ ಮೂಲಕ ಸರ್ಕಾರಿ ಕಾರ್ಯಕ್ರಮಗಳು ಜಾರಿಯಾಗುತ್ತವೆ. ಆದ್ದರಿಂದ ಗ್ರಾಮಸಭೆಯಲ್ಲಿ ಭಾಗವಹಿಸಿ ತಮ್ಮ ಬೇಡಿಕೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಜಾಗೃತರಾಗಿ ತಮ್ಮೊಳಗಿನ ಹಿಂಜರಿಕೆ ಬಿಟ್ಟು ಗ್ರಾಮಸಭೆಯಲ್ಲಿ ಭಾಗವಹಿಸಬೇಕು ಎಂದರು.

ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಶಿವಮ್ಮ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮಹಿಳೆಯರಿಗೆ ಕೊಟ್ಟಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಅಭಿವೃದ್ಧಿಗೆ ಸಹಕಾರಿಯಾಗೋಣ ಎಂದರು.

ಗ್ರಾಪಂ ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಚಂದ್ರಶೇಖರ್, ಭಾಗ್ಯಮ್ಮ, ನಾಗಮಣಿ ಮಹೇಂದ್ರ, ಹೋಂಡಾ ಸಿದ್ದೇಗೌಡ, ಸತೀಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾರತಿ ಮತ್ತಿತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net