

ರಾಮ ಕಿಶನ್ ಕೆ.ವಿ. ಬೆಂಗಳೂರು
ಸದಾ ಭೀತಿಯಲ್ಲೇ ದಿನದೂಡುವ ದ್ವಿಚಕ್ರ ವಾಹನಸವಾರರು, ದಿಢೀರ್ ಸಂಭವಿಸುವ ಅಪಘಾತಗಳು, ಮಧ್ಯರಾತ್ರಿ ಹಾಗೂ ಬೆಳಬೆಳಗ್ಗೆ ವಿಪರೀತ ಕೂಗಾಟ, ರಸ್ತೆಯಲ್ಲಿ ಎಲ್ಲೆಂದರಲ್ಲಿ ಗಲೀಜು... ರಾಜಧಾನಿಯಲ್ಲಿ ಬೀದಿನಾಯಿಗಳ ಕಾಟಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ!
ಬೀದಿನಾಯಿ ದಾಳಿ ಸುದ್ದಿಗಳಿಗೆ ಕೊನೆಮೊದಲೇ ಇಲ್ಲ ಎಂಬಂತಾಗಿದೆ. ಕಳೆದ ಬುಧವಾರ (ಆ. 28) ಜಾಲಹಳ್ಳಿ ಏರ್ಫೋರ್ಸ್ ಈಸ್ಟ್ 7ನೇ ವಸತಿ ಸಮುಚ್ಚಯ ನಿವಾಸಿಯಾಗಿದ್ದ 76 ವರ್ಷದ ವೃದ್ಧೆ ರಾಜ್ದುಲಾರಿ ಸಿನ್ಹಾ ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದಾಗ 12&13 ನಾಯಿಗಳ ದಾಳಿಗೆ ತುತ್ತಾಗಿದ್ದರು. ತಲೆ, ಕತ್ತು ಮತ್ತು ಕೈಗೆ ತೀವ್ರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದರು. ಈ ಟನೆ ಬಳಿಕ ನಗರದಲ್ಲಿ ಬೀದಿನಾಯಿಗಳ ಉಪಟಳ ಮತ್ತೆ ಚರ್ಚೆಗೆ ಗ್ರಾಸವಾಯಿತು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಬೀದಿನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಬಾಣಸವಾಡಿಯ ಒಎಂಬಿಆರ್ ಬಡಾವಣೆಯಲ್ಲಿ ಶುಕ್ರವಾರ (ಆ.30) ನಡೆದಿದೆ.
ರಾಜಧಾನಿಯ ಹಲವು ಪ್ರದೇಶಗಳಲ್ಲಿ ಬೀದಿನಾಯಿಗಳ ಸಮಸ್ಯೆ ಹೆಚ್ಚುತ್ತಿದ್ದು, ಕೆಲವೆಡೆ ಜನರು ಓಡಾಡುವುದೇ ಕಷ್ಟವಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಸವಾರರು ನಾಯಿಕಾಟದಿಂದ ರೋಸಿ ಹೋಗಿದ್ದಾರೆ. ಮಕ್ಕಳ ಮೇಲೂ ನಾಯಿ ದಾಳಿಯಾಗುತ್ತಿರುವುದು ಆತಂಕ ಮೂಡಿಸಿದೆ. ಹೋಟೆಲ್, ಮಾಂಸದ ಅಂಗಡಿಗಳು ಹೆಚ್ಚಿರುವ ಕಡೆಗಳಲ್ಲಿ ಸಮಸ್ಯೆ ಹೆಚ್ಚಿದೆ. ಸಾರ್ವಜನಿಕರು ಸಿಕ್ಕ ಸಿಕ್ಕಲ್ಲಿ ಆಹಾರ ತ್ಯಾಜ್ಯ ಎಸೆಯುತ್ತಿರುವುದು ಸಮಸ್ಯೆ ಬಿಗಡಾಯಿಸಲು ಪ್ರಮುಖ ಕಾರಣವಾಗಿದೆ.
2020-21ರಲ್ಲಿ 18,629 ಜನರು ಹಾಗೂ 2022&23ರಲ್ಲಿ 19,770 ಮಂದಿ ನಾಯಿಕಡಿತಕ್ಕೆ ಒಳಗಾಗಿದ್ದರು. ಬಿಬಿಎಂಪಿ ಪಶುಪಾಲನಾ ಇಲಾಖೆ ಅಂಕಿಅಂಶಗಳ ಪ್ರಕಾರ, 2022&23ರಲ್ಲಿ 2.79 ಲಕ್ಷ ಬೀದಿನಾಯಿಗಳಿದ್ದವು. ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 39 ಸಾವಿರ ಇದ್ದವು. ಇವುಗಳಲ್ಲಿ ಲಕ್ಷ ಶ್ವಾನಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2024ರಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನಾಯಿಗಳಿಗೆ ಸಂತಾನಶಕ್ತಿ ಹರಣ ಮಾಡುವ ಪಾಲಿಕೆ, ಅವು ಮನುಷ್ಯರ ಮೇಲೆ ದಾಳಿಯನ್ನು ತಡೆಯುವಲ್ಲಿ ಕಟ್ಟಿನಿಟ್ಟಿನ ಕ್ರಮಕ್ಕೆ ಮಾತ್ರ ಮನಸ್ಸು ಮಾಡುತ್ತಿಲ್ಲ.
ಶ್ವಾನ ದಾಳಿ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದಂತೆ, ಆ ಪ್ರದೇಶದಲ್ಲಿದ್ದ ನಾಯಿಗಳನ್ನು ಸೆರೆಹಿಡಿದು ತರಲಾಗುತ್ತದೆ. ಬಳಿಕ ಅವುಗಳನ್ನು ವೀಕ್ಷಣೆಯಲ್ಲಿಡಲಾಗುತ್ತದೆ. ಶಸ್ತ್ರಚಿಕಿತ್ಸೆ ಬಳಿಕ ಹೊರಬಿಡಲಾಗುತ್ತದೆ. ಅವು ಕೆಲ ತಿಂಗಳುಗಳ ನಂತರ ಮತ್ತೆ ಜನರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತವೆ. ಹೀಗಾಗಿ ಬೀದಿನಾಯಿ ದಾಳಿಯನ್ನು ಸಂಪೂರ್ಣವಾಗಿ ನಿಮೂರ್ಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಶಾವನದಾಳಿ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲು ಬಿಬಿಎಂಪಿ ತನ್ನ 8 ವಲಯಗಳಲ್ಲಿ ಪ್ರತ್ಯೇಕ ಸ್ಥಳ ಗುರುತಿಸಬೇಕು. ಆಕ್ರಮಣಕಾರಿ ಶ್ವಾನಗಳನ್ನು ಸೆರೆಹಿಡಿದು, ಅಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಶ್ವಾನ ಪ್ರೇಮಿಗಳು ಸಲಹೆ ಅನುಷ್ಠಾನಗೊಂಡಿಲ್ಲ. ಪ್ರತಿ ವಲಯದಲ್ಲಿರುವ ಎಬಿಸಿ ಕೇಂದ್ರಗಳಲ್ಲಿ ಶ್ವಾನಗಳನ್ನು ಹಿರಿದಿಡಲು ಸ್ಥಳಾವಕಾಶದ ಕೊರತೆ ಎದುರಾಗಿದೆ. ಬಹುತೇಕ ಕೇಂದ್ರಗಳಲ್ಲಿ ಏಕಕಾಲಕ್ಕೆ 20 ನಾಯಿಗಳನ್ನು ವೀಕ್ಷಣೆಗೆ ಒಳಪಡಿಸಬಹುದು. ಇದರಿಂದ ಇತರೆ ಬೀದಿನಾಯಿಗಳೊಂದಿಗೆ ಆಕ್ರಮಣಕಾರಿ ನಾಯಿಗಳನ್ನು ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ ಎಂದು ಎಬಿಸಿ ಕೇಂದ್ರದ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ರಾಜಧಾನಿಯ ಹೊರವಲಯದಲ್ಲಿ ಸಮಸ್ಯೆ ಹೆಚ್ಚಿದೆ. ಅದರಲ್ಲೂ ಮಹದೇವಪುರ, ಆರ್.ಆರ್. ನಗರ, ಯಲಹಂಕ, ಕಲಾಸಿಪಾಳ್ಯ, ಚಾಮರಾಜಪೇಟೆ, ಬೆಂಗಳೂರು ದಣ, ಬೊಮ್ಮನಹಳ್ಳಿ ಮುಂತಾದ ಪ್ರದೇಶಗಳಲ್ಲಿ ಬೀದಿನಾಯಿ ಕಾಟ ಹೆಚ್ಚುತ್ತಿರುವುದ ಗಮನಕ್ಕೆ ಬಂದಿದೆ. ಶ್ವಾನ ಕಡಿತ, ಬೀದಿನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ನಿತ್ಯ 50ಕ್ಕೂ ಅಧಿಕ ಕರೆಗಳು ಬಿಬಿಎಂಪಿಂ ಪಶುಪಾಲನಾ ಇಲಾಖೆಗೆ ಬರುತ್ತಿದ್ದರೂ ನಿರೀತ ಪರಿಹಾರ ಸಿಗುತ್ತಿಲ್ಲ.
ಪ್ರತಿ ವಲಯದಲ್ಲಿ ನಿರಂತರ ಕಾರ್ಯಾಚರಣೆ ನಡೆಸಿದರೆ ಕನಿಷ್ಠ ಸಾವಿರ ಅಪಾಯಕಾರಿ ನಾಯಿಗಳು ಸಿಗುತ್ತವೆ. ಸದ್ಯ ಎಬಿಸಿ ಕೆಂದ್ರಗಳಲ್ಲಿ ಪ್ರತಿ ತಿಂಗಳು ಸರಾಸರಿ 4 ಸಾವಿರ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಈ ಸಂಖ್ಯೆಯನ್ನು ದ್ವಿಗುಣಗೊಳಿಸಿದರೆ, 2026-27ರ ವೇಳೆಗೆ ಬೀದಿನಾಯಿಗಳ ಹಾವಳಿ ಸಮಸ್ಯೆಯನ್ನು ಶೇ.80 ಹತೋಟಿಗೆ ತರಬಹುದಾಗಿದೆ ಎಂದು ಪಶುವೈದ್ಯಕಿಯ ವೈದ್ಯರೊಬ್ಬರು ಸಲಹೆ ನೀಡಿದ್ದಾರೆ.
ಬೀದಿನಾಯಿ ದಾಳಿಗೊಳಗಾದ ವ್ಯಕ್ತಿಗೆ ಆಗಿರುವಂತಹ ಗಾಯದ ತೀವ್ರತೆ ಆಧರಿಸಿ ಬಿಬಿಎಂಪಿ ಪರಿಹಾರ ನೀಡುತ್ತಿದೆ. ಪ್ರತಿ ಗಾಯಕ್ಕೆ 2 ಸಾವಿರ ರೂ. ನಂತೆ ಪರಿಹಾರ ನೀಡುತ್ತದೆ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬಿಲ್ ನೀಡಿದರೆ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ. 2015 ರಿಂದ ಈವರೆಗೆ ನಾಯಿ ದಾಳಿಗೆ ಒಳಗಾದವರ ಚಿಕಿತ್ಸೆಗಾಗಿ ಸುಮಾರು 30 ಲಕ್ಷ ರೂ. ಭರಿಸಿದೆ.