ಬೀದಿ ನಾಯಿಗಳ ಹಾವಳಿ ಸಿಪಿಐಎಂ ಪ್ರತಿಭಟನೆ

Dog_Protest_02
Published on

ತುಮಕೂರು: ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು, ನಾಯಿಗಳ ಸಂತತಿ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ ಹಾಗೂ ಬೀದಿ ನಾಯಿಗಳ ದಾಳಿಗೆ ತುತ್ತಾದವರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

ನಗರದ ಮಹಾನಗರಪಾಲಿಕೆ ಕಚೇರಿ ಮುಂಭಾಗ ಮಂಗಳವಾರ ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಇತ್ತೀಚೆಗೆ ಬೀದಿ ನಾಯಿಯ ದಾಳಿಗೆ ತುತ್ತಾಗಿರುವ ಬಾಲಕನ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ತುಮಕೂರು ಮಹಾನಗರಪಾಲಿಕೆ ಭರಿಸಬೇಕು ಹಾಗೂ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್​ಮುಜೀಬ್​, ತುಮಕೂರು ನಗರ ಸ್ಮಾರ್ಟ್​ ಸಿಟಿಯಾಗಿದೆ. ಆದರೆ, ಪಾಲಿಕೆಯಲ್ಲಿ ಪ್ರತ್ಯೇಕವಾಗಿ ಪಶುವಿಭಾಗ ಮತ್ತು ಆರಣ್ಯ ವಿಭಾಗಗಳಿಲ್ಲ. ಅದನ್ನು ತಕ್ಷಣ ಪ್ರಾರಂಬಿಸಬೇಕು. ಬೀದಿನಾಯಿ ದಾಳಿಯಿಂದ ಗಾಯಗೊಂಡ ಮಗುವಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಲ್ಲಿ ಸರ್ಜನ್​ ಇಲ್ಲ. ಹಾಗಾಗಿ, ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಬೇಕಾಗಿದೆ. 30 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆಯಿರುವ ತುಮಕೂರು ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಮುಖ್ಯವೈದ್ಯರಿಲ್ಲ. ಬೀದಿನಾಯಿಗಳ ಹಾವಳಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ನಗರದ ಹಲವು ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಬೇಕು. ಶಾಲೆಗೆ ಹೋಗುವ ಮಕ್ಕಳು ಭಯದಿಂದಲೇ ಓಡಾಡಬೇಕಿದೆ. ವಯೋವೃದ್ಧರು, ವಾಯುವಿಹಾರಕ್ಕೆ ತೆರಳುವವರು ಸಹ ಭಯಪಡಬೇಕಾದ ಪರಿಸ್ಥಿತಿ ನಗರದಲ್ಲಿ ನಿಮಾರ್ಣವಾಗಿದೆ ಎಂದು ಸಿಪಿಐಎಂ ನಗರ ಕಾರ್ಯದರ್ಶಿ ಎ. ಲೋಕೇಶ್​ ತಿಳಿಸಿದರು.

ಯುವ ಮುಖಂಡ ಸುಜಿತ್​ನಾಯಕ್​ ಮಾತನಾಡಿ ಕೈಗಾರಿಕೆಗಳಿಂದ ರಾತ್ರಿ ಪಾಳಯದ ಕೆಲಸ ಮುಗಿಸಿ ಬರುವವರು ಭಯದಿಂದಲೇ ಮನೆಗೆ ತೆರಳಬೇಕಾಗಿದೆ. ಮಳೆಗಾಲವಾದ್ದರಿಂದ ನಾಯಿಗಳ ಹಾವಳಿಗೆಯಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆಯಲ್ಲಿ ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆಗಳು ಇವೆ. ಸೂಕ್ತ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯ ಉನ್ನತಿಗೆ ಕ್ರಮವಹಿಸಬೇಕು ಎಂದರು.

ನಮ್ಮ ಶಾಲೆಗೆ ಸುಮಾರು 300 ವಿದ್ಯಾರ್ಥಿಗಳ ಬರುತ್ತಿದ್ದು ಈ ಭಾಗದಲ್ಲಿ ನಾಯಿಗಳ ಹಾವಳಿ ತುಂಬಾ ಇದ್ದು ಪ್ರಾಣಭಯದಿಂದಲೇ ಮಕ್ಕಳು ಓಡಾಡಬೇಕಿದೆ. ಪಾಲಿಕೆ ಸಿಬ್ಬಂದಿ ಬೀದಿನಾಯಿಗಳನ್ನು ನಿಯಂತ್ರಿಸಬೇಕಿದೆ ಎಂದು ಮರಳೂರು ದಿಣ್ಣೆ ಸರ್ಕಾರಿ ಶಾಲೆಯ ಎಸ್​ಡಿಎಂಸಿ ಅಧ್ಯಕ್ಷ ಮಂಕ್​ದುಮ್​ಅಲಿ ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘಟನೆಯ ಟಿ.ಆರ್​. ಕಲ್ಪನಾ ಮಾತನಾಡಿ ಬೀದಿನಾಯಿಗಳನ್ನು ನಿಯಂತ್ರಿಸಲು ವಾರ್ಡ್​ವಾರು ಅಧಿಕಾರಿಗಳನ್ನು ನೇಮಕಮಾಡಿ ಕ್ರಮಗೊಳ್ಳಬೇಕು ಎಂದರು

ಇದು ಜನಪರವಾದ ಹೋರಾಟವಾಗಿದ್ದು ನನ್ನ ಬೆಂಬಲವಿದೆ ಎಂದು ಹೋರಾಟದ ಸ್ಥಳಕ್ಕೆ ಆಗಮಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಭರವಸೆಯಿತ್ತರು.

ಪ್ರತಿಭಟನೆಯಲ್ಲಿ ಕೋಳಗೇರಿ ನಿವಾಸಿಗಳ ಸಂಘದ ಮುಖಂಡೆ ಅನುಪಮ, ಮೆಳೇಕೋಟೆಯ ಶಂಕರಪ್ಪ, ಆಲ್ತಾಫ್​, ಎಸ್​.ರಾಘವೇಂದ್ರ, ಪಂಡಿತ್​ ಜವಹರ್​, ಅರುಣ್​, ಖುದ್ದುಸ್​ ಕೃಷ್ಣಮೂರ್ತಿ, ಮುಬಾರಕ್​, ತಾಜುದ್ದೀನ್​, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಆಯುಕ್ತರ ಭರವಸೆ

ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆ ಹಾಗೂ ಹಾವಳಿ ನಿಯಂತ್ರಿಸಲು ಸುಮಾರು 3000 ಸಾವಿರ ನಾಯಿಗಳ ಸಂತಾನಹರಣ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ, ಗಾಯಗೊಂಡ ಬಾಲಕನ ಚಿಕಿತ್ಸೆ ನಿಯಾನುಸಾರ ಕ್ರಮ ಕೈಗೊಳ್ಳಲಾಗುವುದು. ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಮೂಲಭೂತ ಸೌಲಭ್ಯಗಳೊಂದಿಗೆ ಅಜ್ಜಗೊಂಡನಹಳ್ಳಿಯಲ್ಲಿ ಚಿಕಿತ್ಸಾಲಯ ಆರಂಭಿಸಲಾಗುವುದು ಎಂದು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತೆ ಬಿ.ವಿ.ಆಶ್ವಿಜ ಭರವಸೆಯಿತ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net