ವಿರಾಜಪೇಟೆಯಲ್ಲಿ ಬೀದಿನಾಯಿಗಳ ಕಾಟ

ವಿರಾಜಪೇಟೆಯಲ್ಲಿ ಬೀದಿನಾಯಿಗಳ ಕಾಟ
Published on

ಸುನಿಲ್ ಕುಮಾರ್ ಬೋರ್ಕಾರ್ ವಿರಾಜಪೇಟೆ

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಓಡಾಡುವುದು ಕಷ್ಟಸಾಧ್ಯವಾಗಿದೆ.

ಬೀಡಾಡಿ ದನಗಳ ಸಮಸ್ಯೆ ಕಡಿಮೆ ಆಗುತ್ತಿದ್ದಂತೆ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಗಲು ವಾಹನ ಸವಾರರಿಗೆ ತೊಂದರೆ ನೀಡಿದರೆ, ರಾತ್ರಿಯ ಸಂದರ್ಭ ಒಬ್ಬಂಟಿಯಾಗಿ ಓಡಾಡುವವರಿಗೆ ಹಾಗೂ ದ್ವಿಚಕ್ರ ಸವಾರರ ಮೇಲೆ ದಾಳಿಗೆ ಮುಂದಾಗುತ್ತಿವೆ.

ಕತ್ತಲೆಯಾಗುತ್ತಿದ್ದಂತೆ ವಿರಾಜಪೇಟೆ ಪಟ್ಟಣದಲ್ಲಿ ನಾಯಿಗಳ ದಂಡೇ ಕಂಡುಬರುತ್ತದೆ. ಒಬ್ಬೊಂಟಿಯಾಗಿ ಓಡಾಡುವವರು ಭಯದಲ್ಲೇ ಓಡಾಡುವಂತಾಗಿದೆ. ಅಲ್ಲದೆ ಪರಸ್ಪರ ಕಚ್ಚಾಡುತ್ತ ಗದ್ದಲ ಏರ್ಪಡಿಸುವ ಮೂಲಕ ಪಟ್ಟಣ ನಿವಾಸಿಗಳ ನೆಮ್ಮದಿ ಕಸಿದಿವೆ.

ಪ್ರತಿ ಬೀದಿಗಳಲ್ಲಿ 5ರಿಂದ10 ನಾಯಿಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು, ರಾತ್ರಿ ಇಡೀ ಬೊಗಳುವ ಮೂಲಕ ಗದ್ದಲ ಏರ್ಪಡಿಸುತ್ತಿವೆ.

ಒಂದು ನಾಯಿ ಬೊಗಳಿದರೆ ಇನ್ನುಳಿದವು ಕೂಡ ಧ್ವನಿ ಗೂಡಿಸುವ ಮೂಲಕ ನೆಮ್ಮದಿ ಕಸಿಯುತ್ತಿವೆ.

ಪ್ರತಿ ಬೀದಿಗಳಲ್ಲಿ ಸಂಚರಿಸುವ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡುವ ಮೂಲಕ ಆತಂಕ ಸೃಷ್ಟಿಸುತ್ತಿವೆ. ಅಲ್ಲದೆ ಮಕ್ಕಳು, ಹಿರಿಯರು ಒಬ್ಬಂಟಿಯಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸ್ಥಳೀಯ ಆಡಳಿತ ವ್ಯವಸ್ಥೆಯಾಗಲಿ, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕ್ರಮವಹಿಸುತ್ತಿಲ್ಲ.

ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನ ಇಲ್ಲ: ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಪುರಸಭೆಗೆ ಸ್ಥಳೀಯರು ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

ಹೋಟೆಲ್, ಮಾಂಸದ ಅಂಗಡಿಗಳ ಮುಂದೆ ಹೆಚ್ಚಾಗಿ ಬೀದಿ ನಾಯಿಗಳು ಕಾಣಿಸಿಕೊಳ್ಳುತ್ತಿವೆ. ಮಾಂಸದಂಗಡಿ ಹಾಗೂ ಹೋಟೆಲ್ ತ್ಯಾಜ್ಯಗಳನ್ನು ರಸ್ತೆ ಬದಿ ಹಾಗೂ ಕಸದ ತೊಟ್ಟಿಯಲ್ಲಿ ಹಾಕುತ್ತಿರುವುದರಿಂದ ಬೀದಿನಾಯಿಗಳು ಪಟ್ಟಣದಲ್ಲಿ ಹೆಚ್ಚಾಗಲು ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ಸಂತಾನ ಹರಣ ಚಿಕಿತ್ಸೆ ನೀಡಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ಪುರಸಭೆ ವಿಫಲವಾಗಿದೆ ಎಂಬೂದು ಸಾರ್ವಜನಿಕರ ಆರೋಪವಾಗಿದೆ.

ಅಲ್ಲದೆ, ಕಸದ ತೊಟ್ಟಿಗಳಲ್ಲಿ ಹಾಗೂ ಶೇಖರಿಸಿಟ್ಟಿದ್ದ ಕಸವನ್ನು ಈ ಬೀದಿನಾಯಿಗಳು ಎಳೆದಾಟಿ ಚೆಲ್ಲಾಪಿಲ್ಲಿಗೊಳಿಸುತ್ತಿದ್ದು, ಪಟ್ಟಣದಲ್ಲಿ ಅಶುಚಿತ್ವ ಹಾಗೂ ಅನೈರ್ಮಲ್ಯ ಉಂಟಾಗಲು ಕಾರಣವಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net