

ಬೆಂಗಳೂರು: ಶಿಕ್ಷಣ ಇಲಾಖೆ 2020-21ನೇ ಸಾಲಿಗೆ ಪ್ರವೇಶ ಪ್ರಕ್ರಿಯೆ ಮುಂದೂಡಿದ್ದರೂ ಕೆಲವು ಪ್ರತಿಷ್ಠಿತ ಶಾಲೆಗಳು ಆನ್ಲೈನ್ನಲ್ಲಿ ತರಗತಿ ನಡೆಸುವ ನೆಪದಲ್ಲಿ ಪಾಲಕರಿಂದ ಶುಲ್ಕ ವಸೂಲಿಗೆ ಮುಂದಾಗಿದ್ದು, ಏ.22ರೊಳಗೆ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕ ಪಾವತಿಸುವಂತೆ ಡೆಡ್ಲೈನ್ ನಿಗದಿ ಪಡಿಸಿವೆ.
ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದ್ದು, ಈ ಸಮಯ ವ್ಯರ್ಥ ಮಾಡದೆ ಏ.22ರಿಂದ ಆನ್ಲೈನ್ ತರಗತಿ ಆರಂಭಿಸುತ್ತೇವೆ. ಕೊನೇ 10 ನಿಮಿಷ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು ಅವಕಾಶ ನೀಡಲಾಗುತ್ತದೆ. ಅಲ್ಲದೆ, ಶಾಲೆಯ ಮೊಬೈಲ್ ಆಪ್ ಮೂಲಕ ವಿದ್ಯಾರ್ಥಿಗಳಿಗೆ ಇ-ಬುಕ್ಸ್ಗಳು ದೊರೆಯಲಿದೆ. ಶುಲ್ಕ ಪಾವತಿಸಿದರೆ, ಅವುಗಳನ್ನು ಡೌನ್ಲೋಡ್ ಮಾಡಿಕೊಂಡು ವ್ಯಾಸಂಗ ಆರಂಭಿಸಬಹುದು. ಈ ಹಿನ್ನೆಲೆಯಲ್ಲಿ ಪಾಲಕರು ಏ.22ರೊಳಗೆ ಶುಲ್ಕ ಪಾವತಿ ಮಾಡಬೇಕು ಎಂದು ಶಾಲಾ ಆಡಳಿತ ಮಂಡಳಿಗಳು ಪಾಲಕರಿಗೆ ಕಳುಹಿಸಿರುವ ಸಂದೇಶದಲ್ಲಿ ತಿಳಿಸಲಾಗಿದೆ.
ನಿಯಮವೇನಿದೆ?: ದೇಶದಲ್ಲಿ ಲಾಕ್ಡೌನ್ ಚಾಲ್ತಿಯಲ್ಲಿರುವುದರಿಂದ ಶಿಕ್ಷಣ ಇಲಾಖೆ ಸೂಚನೆ ನೀಡುವವರೆಗೂ 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಿಸುವಂತಿಲ್ಲ. ಈಗಾಗಲೇ ಪಾಲಕರಿಂದ ಶುಲ್ಕ ಪಡೆದಿದ್ದರೆ, ಅದನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಶಾಲೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ. ಆದರೂ, ಕೆಲವು ಖಾಸಗಿ ಶಾಲೆಗಳು ಇದನ್ನು ಮೀರಿ ನಡೆಯುತ್ತಿದೆ.