

ಮಳವಳ್ಳಿ: ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ತಾಲೂಕಿನ ಬಿ.ಜಿ.ಪುರ ಹೋಬಳಿಯ ತಿಗಡಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ನವೀಕರಣ ಹಾಗೂ ಎರಡು ಹೊಸ ಕೊಠಡಿ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳ ಡಿಜಿಟಲೀಕರಣದ ಜತೆಗೆ ಕ್ಲಸ್ಟರ್‌ಗೊಂದು ಮಲ್ಟಿ ಮೀಡಿಯಾ ಸೆಂಟರ್ ತೆರೆಯಲಾಗುವುದು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಹಾಗೂ ಶಿಕ್ಷಣ ಇಲಾಖೆಯ ಮನವಿಯ ಆಧಾರದ ಮೇರೆಗೆ ಖಾಸಗಿ ಕಂಪನಿಯೊಂದು ತಮ್ಮ ಸಿಎಸ್‌ಆರ್ ಫಂಡ್ ನಲ್ಲಿ 49 ಲಕ್ಷ ರೂ.ವೆಚ್ಚದ ನೂತನ ಕೊಠಡಿ ನಿರ್ಮಾಣ ಹಾಗೂ ಶಾಲೆ ಕಟ್ಟಡವನ್ನು ನವೀಕರಣಗೊಳಿಸುತ್ತಿರುವುದಕ್ಕೆ ತಾಲೂಕಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ನವೀಕರಣಗೊಳಿಸಲು ಹಲವು ಖಾಸಗಿ ಸಂಸ್ಥೆಗಳು ನಮ್ಮ ಕೋರಿಕೆಗೆ ಮನ್ನಣೆ ನೀಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಮುಂದೆ ಬಂದಿದ್ದು, ಇದಕ್ಕೆ ಪೂರಕವಾಗಿ ಈಗಾಲೇ ಪ್ರಾರಂಭಿಕ ಹಂತವಾಗಿ ಮಳವಳ್ಳಿ ಪಟ್ಟಣದಲ್ಲಿನ ಸರ್ಕಾರಿ ಶಾಲೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತುಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಬಿ.ಜಿ.ಪುರ ಗ್ರಾ.ಪಂ.ಅಧ್ಯಕ್ಷ ಸಿದ್ಧರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ. ಉಮಾ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ಶಿಕ್ಷಣ ಸಂಯೋಜಕ ದಯಾನಂದ್, ಸಿ.ಆರ್.ಪಿ. ಧನಂಜಯ್, ಎಸ್.ಡಿ.ಎಂ.ಸಿ ಅಧ್ಯಕ್ಷ ರೇವಣ್ಣ ಸ್ವಾಮಿ, ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಮುಖಂಡರಾದ ಅಂಬರೀಶ್, ಎಚ್.ಎಂ.ಮಹೇಶ್ ಸೇರಿದಂತೆ ಇತರರಿದ್ದರು.