ಹೆಸರು ಚಿರಸ್ಥಾಯಿಯಾಗಿಸಲು ಕ್ರಮ

dk
Published on

ಚನ್ನಪಟ್ಟಣ: ಬಿ. ಸರೋಜಾದೇವಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಸರ್ಕಾರದಮಟ್ಟದಲ್ಲಿ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ತಿಳಿಸಿದರು.

ತಾಲೂಕಿನ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಸರೋಜಾದೇವಿ ಅವರ ಕಲಾಸೇವೆ ಅನನ್ಯ. ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಲು ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ದಣ ಭಾರತದ ಖ್ಯಾತ ನಟರ ಜತೆ ತಲಾ 20 ರಿಂದ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರವಾದ ಕೀರ್ತಿ ಸಂಪಾದಿಸಿದ್ದಾರೆ. ಇಡೀ ಕರ್ನಾಟಕ ಸರ್ಕಾರ, ದಣ ಭಾರತದ ಕಲಾವಿದರು ಅವರಿಗೆ ಗೌರವಪೂರ್ವಕವಾಗಿ ನಮನ ಅರ್ಪಿಸಿದ್ದೇವೆ ಎಂದು ತಿಳಿಸಿದರು.

ಸಿನಿಮಾಗಳಲ್ಲಿ ನಟನೆ ಮಾಡು ಎಂದರು!: ಬಿ.ಸರೋಜಾದೇವಿ ನಮ್ಮ ಜಿಲ್ಲೆಯ ಮಗಳು. ಅವರ ಬಗ್ಗೆ ಸಾಕಷ್ಟು ಅಭಿಮಾನವಿದೆ. ನನಗೆ ಚಿಕ್ಕ ವಯಸ್ಸಿನಿಂದಲೂ ಬಹಳ ಪರಿಚಯವಿದೆ. ನಾನು ಆರಂಭದಲ್ಲಿ ಸಚಿವನಾದಾಗ ನನ್ನನ್ನು ಕರೆದು ನೀನು ಸಿನಿಮಾಗಳಲ್ಲಿ ನಟನೆ ಮಾಡಬೇಕೆಂದು ಹೇಳಿದ್ದರು. ಅಂತಹ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡಿರುವ ನೋವಿದೆ ಎಂದು ಡಿಸಿಎಂ ಹಳೇ ಟನೆಗಳನ್ನು ಮೆಲುಕು ಹಾಕಿದರು.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಈ ಹುಟ್ಟು ಸಾವಿನ ನಡುವೆ ನಾವು ಏನು ಸಾಧನೆ ಮಾಡುತ್ತೇವೆಯೋ ಅದು ಶಾಶ್ವತವಾಗಿ ಉಳಿಯುತ್ತದೆೆ. ಬಹಳ ಚಿಕ್ಕ ವಯಸ್ಸಿಗೆ ಭಾರತ ಸರ್ಕಾರದ ಪದ್ಮ ವಿಭೂಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆ ಕಾಲದಲ್ಲಿ ಆ ವಯಸ್ಸಿಗೆ ಯಾರೂ ಆ ಪ್ರಶಸ್ತಿ ಪಡೆದಿರಲಿಲ್ಲ. ಅವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳಲು ರಸ್ತೆಗಳಿಗೆ ಅವರ ಹೆಸರಿಡಬೇಕು ಎಂದು ಶಾಸಕ ಯೋಗೇಶ್ವರ್​ ಒತ್ತಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಡಿಎ ಅಥವಾ ಪಾಲಿಕೆಯಲ್ಲಿ ಈ ವಿಚಾರ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಅವರು ಮಾಡಿರುವ ಅಪಾರವಾದ ಕಲಾ ಸೇವೆ ಅಪ್ರತಿಮ. ಅವರು ಎಂದಿಗೂ ಒಂದೇ ಒಂದು ವಿವಾದಕ್ಕೆ ಸಿಲುಕಲಿಲ್ಲ. ಎಲ್ಲ ವರ್ಗದ ಜನ ಅವರನ್ನು ಬಹಳ ಪ್ರೀತಿ ಹಾಗೂ ಗೌರವದಿಂದ ಕಂಡಿದ್ದಾರೆ. ರಾಜ್ಯಕ್ಕೆ ಸಮಸ್ಯೆ ಎದುರಾದಾಗ ಅವರು ನಮ್ಮ ಜತೆ ನಿಂತು ರಾಜ್ಯದ ಹಿತ ಕಾಪಾಡಿದ್ದಾರೆ. ಕಲೆಗೆ ಹೆಚ್ಚಿಗೆ ಪ್ರೋತ್ಸಾಹ ನೀಡಿರುವುದನ್ನು ನಾವು ಸ್ಮರಿಸಬೇಕು. ಸರ್ಕಾರದ ಪರವಾಗಿ, ಈ ಜಿಲ್ಲೆಯವನಾಗಿ ಅವರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದ್ದೇನೆ ಎಂದರು. ಪ್ರತಿಮೆ ನಿರ್ಮಾಣ ಮಾಡಲಾಗುವುದೇ ಎಂಬ ಪ್ರಶ್ನೆಗೆ, ಪ್ರತಿಮೆ ಮುಖ್ಯವಲ್ಲ. ಅವರ ವಿಚಾರದಲ್ಲಿ ಏನು ಮಾಡಬೇಕು ಎಂಬುದುನ್ನು ನಾವು ಚರ್ಚೆ ಮಾಡಿ ತಿಳಿಸುತ್ತೇವೆ. ಅವರ ಹೆಸರು ಉಳಿದುಕೊಳ್ಳುವಂತೆ ಮಾಡುತ್ತೇವೆ ಎಂದರು.

ಸರೋಜಾದೇವಿ ಬಹಳ ನೇರವಾದಿ. ನೇರವಾಗಿಯೇ ಮಾತನಾಡುತ್ತಿದ್ದರು. ಅಂದಿನ ತಮಿಳುನಾಡು ಸಿಎಂ ಜಯಲಲಿತಾ ಜತೆಗೆ ಮಾತನಾಡುವ ಮೂಲಕ ಚನ್ನಪಟ್ಟಣ ನೀರಾವರಿ ಯೋಜನೆಗೂ ಸಹಕಾರ ಮಾಡಿದ್ದರು. ಅವರ ನೆನಪು ಶಾಶ್ವತವಾಗಿ ಉಳಿಯುವಂತೆ ಮಾಡುತ್ತೇವೆ. ಇದಕ್ಕಾಗಿ ದಶವಾರ, ಚನ್ನಪಟ್ಟಣ, ಬೆಂಗಳೂರಿನಲ್ಲಿ ವಿಶೇಷ ಯೋಜನೆ ರೂಪಿಸುತ್ತೇವೆ. > ಸಿ.ಪಿ.ಯೋಗೇಶ್ವರ್​ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net