

ಬೆಂಗಳೂರು: ನಗರದಲ್ಲಿ ಅಧಿಕ ಸಂಚಾರ ದಟ್ಟಣೆ ಉಂಟಾಗುವ 12 ವಲಯ ಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಾಸ್ವಾನಿ ಸಂಸ್ಥೆಯ ಸಹಯೋಗದೊಂದಿಗೆ ಸೇಂಟ್ ಮಾರ್ಕ್ಸ್ ರಸ್ತೆಯ ಎಸ್ಬಿಐ ವೃತ್ತದ ಬಳಿ ನಗರ ಸಂಚಾರ ಪೊಲೀಸರು ನಿರ್ವಿುಸಿರುವ ‘ನವೀಕೃತಗೊಂಡ ಮಕ್ಕಳ ಸಂಚಾರ ಉದ್ಯಾನ’ ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವ 12 ವಲಯಗಳನ್ನು ನಗರ ಪೊಲೀಸರು ಗುರುತಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರದೇಶಗಳ ಸಂಚಾರ ದಟ್ಟಣೆ ನಿಯಂತ್ರಿಸಿ ರ್ಪಾಂಗ್ ಪ್ರದೇಶ ಸೇರಿ ಹಲವು ಸೌಲಭ್ಯ ಕಲ್ಪಿಸಿ, ಸುಗಮ ಹಾಗೂ ಸರಳವಾಗಿ ವಾಹನ ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ನಗರದಲ್ಲಿ ನಿತ್ಯ 5 ಸಾವಿರ ವಾಹನಗಳು ರಸ್ತೆಗಿಳಿಯುತ್ತಿದ್ದು, ಇದರ ಜತೆಗೆ ಜನ ಸಂಖ್ಯೆಯ ಪ್ರಮಾಣವೂ ಏರಿಕೆಯಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸುವುದು ಸಂಚಾರ ಪೊಲೀಸರಿಗೆ ಸವಾಲಾಗಿದೆ. ಸರ್ಕಾರವು ವೈಟ್ಫೀಲ್ಡ್ ನಲ್ಲಿ ಸಂಚಾರ ಉಪ ವಿಭಾಗ ಆರಂಭಿಸಲಿದೆ. ಇಲ್ಲಿಗೆ ಅಗತ್ಯವಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸದ್ಯದಲ್ಲೇ ನೇಮಿಸಲಾಗುವುದು ಎಂದು ಹೇಳಿದರು. ಸುಗಮ, ಸುರಕ್ಷಿತ ಸಂಚಾರ ಎಲ್ಲರ ಆದ್ಯತೆಯಾಗಬೇಕು. ಜನರ ಸಹಕಾರವಿಲ್ಲದೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ ಎಂದರು.
ಮಹಿಳೆಯರ ಸುರಕ್ಷತೆ ಬಗ್ಗೆ ನಿಗಾ: ಉತ್ತಮವಾದ ಸಂಚಾರ ವ್ಯವಸ್ಥೆ ಇರುವ ನಗರದಲ್ಲಿ ಕಾನೂನು ಸುವ್ಯವಸ್ಥೆಯೂ ಸರಿಯಾಗಿರುತ್ತದೆ. ರಾತ್ರಿ ಸಮಯದಲ್ಲಿ ಸಂಚಾರ ನಿಯಂತ್ರಿಸುವುದು ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ನಿಗಾವಹಿಸುವುದು ಮಹತ್ವದ್ದಾಗಿದೆ. ಮಹಿಳಾ ಸುರಕ್ಷತೆಗಾಗಿ ಈಗಾಗಲೇ ಸರ್ಕಾರ 75 ಪಿಂಕ್ ಹೊಯ್ಸಳ ತರಲು ತೀರ್ವನಿಸಲಾಗಿದ್ದು, ಮಹಿಳೆಯರು ಹೆಚ್ಚಾಗಿರುವ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.
ದೇಶದಲ್ಲೇ ಮೊದಲ ಬಾರಿಗೆ ಸ್ಥಾಪಿಸಿದ ಮಕ್ಕಳ ಸಂಚಾರ ಪೊಲೀಸ್ ಉದ್ಯಾನ ಇದಾಗಿದ್ದು, ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆ ಇಂತಹ ಪಾರ್ಕ್ ನಿರ್ವಿುಸಲು ಚಿಂತನೆ ನಡೆಸಲಾಗಿದೆ ಎಂದರು.
ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, ಸಂಚಾರ ದಟ್ಟಣೆ ನಿಯಂತ್ರಣ ಮಾಡುವ ಬಗ್ಗೆ ಹಲವು ವರ್ಷಗಳಿಂದ ಜಾಗೃತಿ ಮೂಡಿಸಿದರೂ ಸುಧಾರಣೆಯಾಗಿಲ್ಲ. ಮಕ್ಕಳಲ್ಲಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರೆ ಹೆಚ್ಚು ಪ್ರಯೋಜನಕಾರಿ ಆಗಬಹುದು ಎಂದರು.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ, ವಾಸ್ವನಿ ಗ್ರೂಪ್ನ ಅಧ್ಯಕ್ಷ ಅರುಣ್ ಅಡ್ವಾನಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಾತ್ಯಕ್ಷಿಕೆ ರೂಪದಲ್ಲಿ ಮಾಹಿತಿ
ರಸ್ತೆಯನ್ನು ಉಪಯೋಗಿಸುವ, ಸಂಚಾರ ನಿಯಮಗಳನ್ನು ಅರ್ಥ ಮಾಡಿಕೊಂಡು ಅನುಸರಿಸುವಂತೆ ಮಕ್ಕಳನ್ನು ಪ್ರೇರೇಪಿಸಲು, ರಸ್ತೆಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸುವ ಕೌಶಲ ಬೆಳೆಸಲು ರಸ್ತೆಗಳ ಮಾರ್ಕಿಂಗ್ಗಳು, ಕಡ್ಡಾಯ ಮತ್ತು ಮಾಹಿತಿ ಚಿಹ್ನೆಗಳು, ಸಿಗ್ನಲ್ ದೀಪಗಳು ಮತ್ತು ಎಚ್ಚರಿಕೆ ನೀಡುವ ಫಲಕಗಳನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ಪಾರ್ಕ್ನಲ್ಲಿ ಸ್ಥಾಪಿಸಲಾಗಿದೆ.