ಬೇಲೂರು ಸಮಗ್ರ ಅಭಿವೃದ್ಧಿಗೆ ಕ್ರಮ

20blrp4-basavaraj katappa
ಬಸವರಾಜ್ ಕಾಟಪ್ಪ ಸಿಗ್ಗಾವಿ
Published on

ಬೇಲೂರು: ವಿಶ್ವ ಪ್ರಸಿದ್ಧ ಪ್ರವಾಸಿ ಕೆಂದ್ರವಾದ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪುರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ನೂತನ ಮುಖ್ಯಾಧಿಕಾರಿ ಬಸವರಾಜ್ ಕಾಟಪ್ಪ ಸಿಗ್ಗಾವಿ ಹೇಳಿದರು.

ಗುರುವಾರ ಪುರಸಭೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರು ಪುರಸಭೆಯ 23 ವಾರ್ಡ್‌ಗಳಲ್ಲೂ ಮೂಲಸೌಕರ್ಯ ಕಲ್ಪಿಸಲು ಅಧ್ಯಕ್ಷರು ಮತ್ತು ಸದಸ್ಯರ ಜತೆಯಲ್ಲಿ ಚರ್ಚಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಹಕಾರ ಪಡೆದು ಕ್ರಮ ಕೈಗೊಳ್ಳುವುದು. ಜತೆಗೆ ವಿಶ್ವ ವಿಖ್ಯಾತ ಪ್ರವಾಸಿ ಕೆಂದ್ರವಾದ ಬೇಲೂರು ಪಟ್ಟಣಕ್ಕೆ ದಿನನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುವುದರಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು, ಎಲ್ಲೆಂದರಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ, ವ್ಯಾಪಾರಸ್ಥರಿಗೆ ಸೂಕ್ತ ಸ್ಥಳ ನಿಗದಿ ಮಾಡಲಾಗುವುದು. ಪುರಸಭೆಗೆ ಬರುವ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡದೆ ಕಟ್ಟು ನಿಟ್ಟಾಗಿ ನಿರ್ವಹಿಸುವಂತೆ ನೌಕರರಿಗೆ ಸೂಚನೆ ನೀಡುವುದಲ್ಲದೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ನನ್ನನ್ನು ಭೇಟಿ ಮಾಡಿದರೆ ಸಮಸ್ಯೆ ತಿಳಿದು ಪರಿಹರಿಸಲಾಗುವುದು. ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆಯಾಗಿ ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ವಿದ್ಯುತ್ ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ಶೀಘ್ರ ನೀರು ಸರಬರಾಜು ನೌಕರರ ಸಭೆ ನಡೆಸಿ ಮಾರ್ಗದರ್ಶನ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net