ಸಮಸ್ಯೆಗೆ ಹಂತ ಹಂತವಾಗಿ ಪರಿಹಾರ

ಸಮಸ್ಯೆಗೆ ಹಂತ ಹಂತವಾಗಿ ಪರಿಹಾರ
Published on

ಹಾಸನ: ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅದನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಶೀಘ್ರ ಟೆಂಡರ್ ಕರೆಯುವ ಮೂಲಕ ಎಲ್ಲ ವಾರ್ಡ್‌ಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಹಾಸನ ಪಾಲಿಕೆ ಮೇಯರ್ ಗಿರೀಶ್ ಚನ್ನವೀರಪ್ಪ ಹೇಳಿದರು.

ಮಹಾನಗರ ಪಾಲಿಕೆಯ ಕುವೆಂಪು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಸದಸ್ಯರು ಕುಡಿಯುವ ನೀರು, ವಿದ್ಯುತ್, ಚರಂಡಿ, ಯುಜಿಡಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತಂದಿದ್ದಾರೆ. ಅವುಗಳನ್ನು ಹಂತ ಹಂತವಾಗಿ ಶೀಘ್ರದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಮತ್ತು ಅಧಿಕಾರಿಗಳು ಕೂಡ ಸದಸ್ಯರು ಹೇಳಿದಂತಹ ಕೆಲಸವನ್ನು ತಕ್ಷಣವೇ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆ ಆರಂಭವಾಗುತ್ತಿದ್ದಂತೆ ಯೋಗೇಂದ್ರ ಬಾಬು ಮಾತನಾಡಿ, ನಾನು ಪ್ರತಿ ಸಭೆಯಲ್ಲಿ ಕೂಡ ಮಲೆನಾಡು ಕಾಲೇಜಿನ ಬಗ್ಗೆ ಪ್ರಶ್ನೆ ಕೇಳುತ್ತಿದ್ದೇನೆ. ಆದರೆ ಅದಕ್ಕೆ ಸಮರ್ಪಕವಾದ ಉತ್ತರ ಕೊಡುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಮೇಯರ್, ನಾನು ಅಧಿಕಾರಕ್ಕೆ ಬಂದಮೇಲೆ ಅವರಿಗೆ ನೋಟಿಸ್ ನೀಡಿ ಕಾಲೇಜಿನ ಜಾಗವನ್ನು ಸರ್ವೇ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ತೆರಿಗೆಯನ್ನು ಕೂಡ ಕಟ್ಟುವಂತೆ ಸೂಚನೆ ನೀಡಲಾಗಿದೆ ಎಂದರು.

ಮಹಾನಗರ ಪಾಲಿಕೆಗೆ 1.37 ಎಕರೆ ಜಾಗ ನಮ್ಮ ವ್ಯಾಪ್ತಿಗೆ ಬರುವುದರಿಂದ ತಕ್ಷಣವೇ ಅದಕ್ಕೆ ಬೇಲಿ ಹಾಕುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹಲವು ದಿನಗಳಿಂದ ಇರುವ ಸಮಸ್ಯೆಯನ್ನು ತಾರ್ಕಿಕ ಅಂತ್ಯ ಕಾಣುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಈ ನಿಟ್ಟಿನಲ್ಲಿ ಅಧಿಕಾರಿ ಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಯೋಗೇಂದ್ರ ಬಾಬು ಮಾತನಾಡಿ, ಜಾಹೀರಾತು ನಾಮಫಲಕ ಹಾಕುವ ಬಗ್ಗೆ ಕಳೆದ ಬಾರಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಅದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಈಗಾಗಲೇ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ. ನಮ್ಮ ಕಚೇರಿಯಲ್ಲಿ ಕಡತ ನಾಪತ್ತೆಯಾಗಿದೆ. ಗುತ್ತಿಗೆದಾರನ ಹತ್ತಿರ ಇರುವಂತಹ ಕಡತವನ್ನು ತರಿಸಿಕೊಂಡು ಅದರಲ್ಲಿ ಎಷ್ಟು ವರ್ಷಕ್ಕೆ ಮಾಡಿಕೊಡಲಾಗಿದೆ ಎಂಬುದನ್ನು ಪರಿಶೀಲಿಸಿ, ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಮತ್ತು ಅನಧಿಕೃತವಾಗಿ ಇತ್ತೀಚೆಗೆ ಆಗಿರುವಂತಹ ಜಾಹೀರಾತು ಫಲಕವನ್ನು ತೆರವು ಮಾಡಲಾಗುವುದು ಎಂದು ಹೇಳಿದರು.

ಚಂದ್ರು ಮಾತನಾಡಿ, ಹಾಸನಾಂಬ ಜಾತ್ರಾ ಉತ್ಸವದ ಹಿನ್ನೆಲೆಯಲ್ಲಿ ಅಲ್ಲಿ ಕೆಲಸ ಮಾಡುತ್ತಿರುವಂತಹ ಕಾರ್ಮಿಕರ ಮತ್ತು ಗುತ್ತಿಗೆದಾರರು ಸ್ಥಳೀಯ ನಿವಾಸಿಗಳು ಮತ್ತು ವರ್ತಕರಿಗೆ ಸಾಕಷ್ಟು ತೊಂದರೆ ಉಂಟು ಮಾಡುತ್ತಿದ್ದಾರೆ. ನಾವು ಇಲ್ಲಿ ಬ್ಯಾರಿಕೇಡ್ ಹಾಕುತ್ತೇವೆ. ಬೇಕಾದರೆ ನೀವು ಮನೆ ಖಾಲಿ ಮಾಡಿಕೊಂಡು ಹೋಗಿ ಎಂದು ಸ್ಥಳೀಯ ನಿವಾಸಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಅಲ್ಲಿ ಬ್ಯಾರಿಕೇಡ್ ಹಾಕುವಾಗ ನಿವಾಸಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬೇಕಿದ್ದರೆ ಅಲ್ಲಿನ ನಿವಾಸಿಗಳನ್ನು ಒಪ್ಪಿಸುತ್ತೇನೆ, ನಮಗೆ ಸೂಕ್ತ ಪರಿಹಾರವನ್ನು ನೀಡಿದರೆ ಮನೆಯನ್ನೇ ಖಾಲಿ ಮಾಡಿಕೊಂಡು ಹೋಗುತ್ತೇವೆ. ಈ ರೀತಿ ಹಿಂಸೆ ಕೊಡುವುದು ಬೇಡ ಎಂದು ತಕ್ಷಣವೇ ಇದರ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಮಹಾಪೌರರು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ನಿವಾಸಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಈ ಸಂಬಂಧ ಜಿಲ್ಲಾಡಳಿತದೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.

ವೀನ್ ನಾಗರಾಜ್ ಮಾತನಾಡಿ, ನನ್ನ ವಾರ್ಡಿನಲ್ಲಿ ಯುಜಿಡಿ, ಕುಡಿಯುವ ನೀರು, ಬೋರ್‌ವೆಲ್ ಸಮಸ್ಯೆಗಳಿದ್ದು, ಅದನ್ನು ತಕ್ಷಣವೇ ಬಗೆಹರಿಸಿಕೊಡಬೇಕು ಮತ್ತು ಕಾಮಗಾರಿಗೆ ಟೆಂಡರ್ ಮಾಡದೆ ಸಾಕಷ್ಟು ತೊಂದರೆ ಆಗುತ್ತದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂಬಂಧ ಮಾತನಾಡಿದ ಮಹಾಪೌರರು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಚಂದ್ರೇಗೌಡ ಮಾತನಾಡಿ, ಹಾಸನಾಂಬ ಉತ್ಸವದ ಸಂದರ್ಭದಲ್ಲಿ ನಗರದಾದ್ಯಂತ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ತಣ್ಣೀರು ಹಳ್ಳಕ್ಕೆ ಸರಿಯಾದ ರೀತಿ ವ್ಯವಸ್ಥೆ ಮಾಡಿಲ್ಲ. ಅದಕ್ಕೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಇನ್ನೂ ಹಲವು ಸದಸ್ಯರು ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆ ಸೇರಿದಂತೆ ಚರಂಡಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಉಪ ಮಹಾಪೌರರಾದ ಹೇಮಲತಾ ಕಮಲ್ ಕುಮಾರ್, ಆಯುಕ್ತ ಕೃಷ್ಣಮೂರ್ತಿ ಸೇರಿದಂತೆ ಅಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net