

ಚನ್ನಪಟ್ಟಣ : ಕ್ಷೇತ್ರದ ಜನರ ಅಭಿವೃದ್ಧಿ ದೃಷ್ಟಿಯಿಂದ ಕಳೆದ ಉಪಚುನಾವಣೆಯಲ್ಲಿ ಆಯ್ಕೆ ಮಾಡಿದ್ದು, ಅವರ ಆಶಯಗಳಿಗೆ ಧಕ್ಕೆಯಾಗದಂತೆ ತಾಲೂಕಿನ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುತ್ತೇನೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಪೌಳಿದೊಡ್ಡಿ ಬಳಿಯಲ್ಲಿ ನಗರಸಭೆ ವತಿಯಿಂದ ನಿರ್ಮಿಸಲು ಉದ್ದೇಶಿರುವ ತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಪ್ರತಿದಿನ ಹತ್ತು ಟನ್‌ಗಿಂತ ಅಧಿಕ ಕಸ ಉತ್ಪಾದನೆಯಾಗುತ್ತಿದೆ. ಈ ಕಸವನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಕಸ ವಿಲೇವಾರಿ ಮಾಡಲು ಸ್ಥಳವಿಲ್ಲದ ಕಾರಣ ನಗರಸಭೆ ಸಾಕಷ್ಟು ಸಮಸ್ಯೆಗೆ ಒಳಗಾಗಿತ್ತು. ಈ ಸಮಸ್ಯೆಗೆ ಶಾಶ್ವತ ಮುಕ್ತಿ ಕೊಡಿಸಬೇಕು ಎಂದು ವಿಲೇವಾರಿ ಘಟಕಕ್ಕೆ ಜಾಗ ಮಂಜೂರು ಮಾಡಿಸಿ ಇದೀಗ, ಘಟಕದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಚನ್ನಪಟ್ಟಣ ನಗರ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಇದರ ಜತೆಗೆ, ಕಸ ಸೇರಿ ಹಲವು ಸಮಸ್ಯೆಗಳು ಬೆಳೆಯುತ್ತಿವೆ. ಈ ಬಗ್ಗೆ ದೂರದೃಷ್ಠಿ ಇಟ್ಟುಕೊಂಡು ಮೊದಲ ಹಂತವಾಗಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನೂ ಕೆಲ ತಿಂಗಳಲ್ಲಿ ನಗರದ ಕಸದ ಸಮಸ್ಯೆ ಒಂದು ಹಂತಕ್ಕೆ ಸರಿಹೋಗಲಿದೆ. ಈ ಹಿಂದೆ ಕ್ಷೇತ್ರದ ಶಾಸಕನಾಗಿದ್ದ ವೇಳೆ ಈ ಎಲ್ಲ ಸಮಸ್ಯೆಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿರ್ಧಾರ ಮಾಡಿದೆ. ಆದರೆ, ಸೋಲಿನ ಕಾರಣದಿಂದ ಅದೆಲ್ಲವೂ ಸಾಧ್ಯವಾಗಿರಲಿಲ್ಲ. ಇದೀಗ, ಜನ ಮತ್ತೆ ಆಶೀರ್ವಾದ ಮಾಡಿರುವ ಹಿನ್ನೆಲೆಯಲ್ಲಿ ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ನಗರಸಭೆ ಅಧ್ಯಕ್ಷ ವಾಸಿಲ್ ಅಲಿಖಾನ್ ಮಾತನಾಡಿ, ನಗರಸಭೆಯ ಕಸ ವಿಲೇವಾರಿ ಮಾಡಲು ಚೋಳಮಾರನಹಳ್ಳಿ ಸರ್ವೇ ನಂ 90 ರಲ್ಲಿ 9 ಎಕರೆ ಜಾಗ ಮಂಜೂರಾಗಿದೆ. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸಲುವಾಗಿ 4. 94 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಘಟಕದ ಕಾಂಪೌಂಡ್, ರಸ್ತೆ, ಚರಂಡಿ ಹಾಗೂ ನೆಲಹಾಸು ಸೇರಿ ಹಲವು ಕಾಮಗಾರಿ ನಡೆಯಲಿವೆ. ಘಟಕವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.