ಪ್ರಾಸ್ಟೇಟ್​ ಸಮಸ್ಯೆಗೆ 'ಸ್ಟೀಮ್​ ಥೆರಪಿ' ಚಿಕಿತ್ಸೆ; ವಿಶೇಷ ಸಾಧನ ಪರಿಚಯಿಸಿದ ಅಪೋಲೊ ಆಸ್ಪತ್ರೆ

Apollo
Published on

ಬೆಂಗಳೂರು: ಶೇಷಾದ್ರಿಪುರದಲ್ಲಿರುವ ಆಪೋಲೊ ಆಸ್ಪತ್ರೆಯಲ್ಲಿ ಪ್ರಾಸ್ಟೇಟ್​ (ಪುರುಷರ ಜನನೇಂದ್ರಿಯಕ್ಕೆ ಸಂಬಂಧಿಸಿದ ಗ್ರಂಥಿ) ಪ್ರಕರಣಗಳಿಗೆ ಸ್ಟೀಮ್​ ಥೆರಪಿ ಮೂಲಕ ಚಿಕಿತ್ಸೆ ನೀಡುವ ಸಾಧನವನ್ನು ಅನಾವರಣಗೊಳಿಸಲಾಗಿದೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಆಸ್ಪತ್ರೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುರೋ-ಆಂಕೋಲಜಿ, ರೋಬಾಟಿಕ್ಸ್​ ಮತ್ತು ಮೂತ್ರಪಿಂಡ ಕಸಿ ವಿಭಾಗದ ಮುಖ್ಯಸ್ಥ ಡಾ.ಟಿ. ಮನೋಹರ್​, ಶೇಷಾದ್ರಿಪುರ ಅಪೋಲೊ ಆಸ್ಪತ್ರೆ ಉಪಾಧ್ಯಕ್ಷ ಉದಯ್​ ದಾವ್ಡಾ ಹಾಗೂ ಅಪೋಲೊ ಆಸ್ಪತ್ರೆಯ ಸಿಇಒ ಡಾ. ಮನೀಶ್​ ಮಟ್ಟು ಚಿಕಿತ್ಸಕ ಸಾಧನವನ್ನು ಪರಿಚಯಿಸಿದರು.

ಮೂತ್ರಪಿಂಡ ಕಸಿ ವಿಭಾಗದ ಮುಖ್ಯಸ್ಥ ಡಾ. ಟಿ.ಮನೋಹರ್​ ಮಾತನಾಡಿ, ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಹೆಚ್ಚಿನ ಪುರುಷರು ಪ್ರಾಸ್ಟೇಟ್​ ರೋಗಲಕ್ಷಣದಿಂದ ಬಳಲುತ್ತಿದ್ದಾರೆ. ಲೇಸರ್​, ರೋಬಾಟಿಕ್ಸ್​, ಲ್ಯಾಪ್ರೊಸ್ಕೋಪಿಕ್​ ಮುಂತಾದ ವಿಧಾನಗಳ ಮೂಲಕ ಚಿಕಿತ್ಸೆ ನೀಡಬಹುದು. ಇದೀಗ ಪ್ರಾಸ್ಟೇಟ್​ ಸಮಸ್ಯೆಗೆ ಚಿಕಿತ್ಸೆ ನೀಡಲು ಸ್ಟೀಮ್​ ಥೆರಪಿ ವಿಧಾನ ಪರಿಚಯಿಸಲಾಗಿದೆ. ಇದು ಇತರ ಶಸ್ತ್ರಚಿಕಿತ್ಸಾ ವಿಧಾನಗಳಿಗಿಂತ ಭಿನ್ನವಾಗಿದೆ. ಜತೆಗೆ ಔಷಧಗಳ ಅಡ್ಡ ಪರಿಣಾಮವನ್ನು ನಿವಾರಿಸುತ್ತದೆ. 0.45 ಮಿಲಿ ಸ್ಟೀಮ್​ನ್ನು ಚುಚ್ಚುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಆಸ್ಪತ್ರೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಮನೀಶ್​ ಮಟ್ಟು ಮಾತನಾಡಿ, ಆತ್ಯಾಧುನಿಕ ಸಾಧನ ಬಳಸಿಕೊಂಡು ಚಿಕಿತ್ಸೆ ನೀಡುವ ಸ್ಟೀಮ್​ ಥೆರಪಿ ವಿಧಾನ, ಅಮೆರಿಕ, ಚೀನಾ, ಆಸ್ಟ್ರೆಲಿಯಾ, ಜಪಾನ್​, ಮಲೇಷ್ಯಾ ಸೇರಿ ಹಲವು ದೇಶಗಳಲ್ಲಿ ಯಶಸ್ವಿಯಾಗಿದೆ. ಇದೀಗ ಈ ಚಿಕಿತ್ಸಾ ವಿಧಾನವನ್ನು ಅಪೋಲೊ ಆಸ್ಪತ್ರೆ ಭಾರತದಲ್ಲಿ ಪರಿಚಯಿಸಿದೆ. ಅತ್ಯಂತ ಸರಳ ವಿಧಾನದ ಮೂಲಕ ಕೇವಲ 9 ಸೆಕೆಂಡುಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಪ್ರಾಸ್ಟೇಟ್​ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ಸ್ಟೀಮ್​ ಥೆರಪಿ ಚಿಕಿತ್ಸಾ ವಿಧಾನದ ಮೂಲಕ ಸಮಸ್ಯೆ ಗುಣಪಡಿಸಲು ಸಾಧ್ಯವಿದೆ. ಅತ್ಯಾಧುನಿಕ ಸಾಧನ ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ರೋಗಿಗೆ ನೋವುನಿವಾರಕ ಔಷಧ ನೀಡಬೇಕಾದ ಅವಶ್ಯಕತೆಯೂ ಇಲ್ಲ.

-ಉದಯ್​ ದಾವ್ಡಾ, ಅಪೋಲೋ ಆಸ್ಪತ್ರೆ (ಶೇಷಾದ್ರಿಪುರ) ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net