

ಹನಗೋಡು: ಮದ್ಯಪಾನ ಹಾಗೂ ಇತರೆ ಮಾದಕ ವಸ್ತುಗಳ ಸೇವನೆಯಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ಹುಣಸೂರು ಡಿವೈಎಸ್‌ಪಿ ಗೋಪಾಲಕೃಷ್ಣ ತಿಳಿಸಿದರು.
ಹನಗೋಡು ಹೋಬಳಿಯ ಚಿಲ್ಕುಂದ ಐಕಾನ್ ಇಂಟರ್ ನ್ಯಾಷನಲ್ ವಿದ್ಯಾ ಸಂಸ್ಥೆಯಲ್ಲಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ, ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳ ವ್ಯಸನದಿಂದ ಆಗುವ ದೈಹಿಕ ಹಾಗೂ ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳ ಅರಿವಿನ ಕೊರತೆ ಯುವ ಜನಾಂಗದಲ್ಲಿ ಎದ್ದು ಕಾಣುತ್ತಿದೆ. ಮಾದಕ ವಸ್ತುಗಳ ಸೇವನೆಯಿಂದ ವಿದ್ಯಾರ್ಥಿಗಳು ದೂರವಿದ್ದು, ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಸಮಾಜವನ್ನು ಮಾದಕ ವಸ್ತುಗಳ ಸೇವನೆಯಿಂದ ಮುಕ್ತಗೊಳಿಸುವುದು. ಮದ್ಯ ವ್ಯಸನ ಹಾಗೂ ಬಾಲ್ಯ ವಿವಾಹ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಶಾಲಾ ಕಾಲೇಜುಗಳ ಸಮೀಪದಲ್ಲಿ ಕಾನೂನು ಮೀರಿ ಧೂಮಪಾನ ಮದ್ಯಪಾನ ಮಾಡವುದು ಅಪರಾಧವಾಗಿದೆ. ಮಾದಕ ವಸ್ತು ವ್ಯಸನ ಮುಕ್ತ ಸಮಾಜ ನಿರ್ಮಾಣ ಎಲ್ಲರೂ ಕೈ ಜೋಡಿಸೋಣ ಎಂದರು.
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕ ಎನ್. ಮುನಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಲೈಸೆನ್ಸ್ ಮಾಡಿಸದೆ ಬೈಕ್ ಚಾಲನೆ ಮಾಡುವುದು ಅಪರಾಧ. ಮಾದಕ ವ್ಯಸನಿಗಳು ಸಮಾಜಕ್ಕೆ ಹೊರೆಯಾಗಿದ್ದು, ಸಾಮಾಜಿಕ ಸ್ವಾಸ್ಥ್ಯ ಕಲುಷಿತಗೊಳಿಸುತ್ತಿದ್ದಾರೆ. ಮಾದಕ ಪದಾರ್ಥಗಳ ಸೇವನೆಯಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಿ ಸಮರೋಪಾದಿಯಾಗಿ ಅವರನ್ನು ಸರಿ ದಾರಿಗೆ ತರಬೇಕು. ಯುವ ಜನತೆ ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳ ವ್ಯಸನಿಗಳಾಗುವುದನ್ನು ತಡೆಗಟ್ಟಬೇಕಿದೆ. ಪಾಲಕರು ತಮ್ಮ ಮಕ್ಕಳ ನಡವಳಿಕೆಗಳ ಬಗ್ಗೆ ಗಮನ ಹರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಶ್ರೀ ಬೀರೇಗೌಡ ಸೇರಿದಂತೆ ಶಾಲಾ ಶಿಕ್ಷಕ ವೃಂದ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.