ಮುರಗಮಲ್ಲಾದಲ್ಲಿ ರಾಜ್ಯದ ಮೊದಲ ದವಾ ದುವಾ ಆಸ್ಪತ್ರೆ

ಚಿಂತಾಮಣಿ ತಾಲೂಕಿನ ಮುರಗಮಲ್ಲ ಗ್ರಾಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾನಸಿಕ ಆರೋಗ್ಯ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು. ಸಚಿವ ಡಾ.ಎಂ.ಸಿ.ಸುಧಾಕರ್. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಜಿಲ್ಲಾಧಿಕಾರಿ ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ರಾಜ್ಯ ಮಾನಸಿಕ ಆರೋಗ್ಯ ಉಪ ನಿರ್ದೇಶಕಿ ರಜನಿ ಮತ್ತಿತರರು ಇದ್ದರು.
3
Published on

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ - ರಾಜ್ಯದ ವಿವಿಧೆಡೆ ವಿಸ್ತರಿಸುವ ಇಂಗಿತ



ಚಿಂತಾಮಣಿ: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ದವಾ ದುವಾ ಎನ್ನುವ ಮಾನಸಿಕ ರೋಗಿಗಳ ಆಸ್ಪತ್ರೆಯನ್ನು ತಾಲೂಕಿನ ಹಿಂದು ಮತ್ತು ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮುರುಗಮಲ್ಲ ಗ್ರಾಮದ ಅಮ್ಮಾಜಾನ್ ಬಾವಾಜಾನ್ ದರ್ಗಾ ಆವರಣದಲ್ಲಿ ಆರಂಭಿಸಿರುವುದು ಸಂತಸ ತಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 15ನೇ ಹಣಕಾಸು ಯೋಜನೆಯಡಿ ತಾಲೂಕು ಮಟ್ಟದ ಆರೋಗ್ಯ ಘಟಕದಲ್ಲಿ ಬ್ಲಾಕ್ ಲೆವೆಲ್ ಪಬ್ಲಿಕ್ ಹೆಲ್ತ್ ಯೂನಿಟ್ (ಬಿಪಿಎಚ್‌ಯು) ಪ್ರಯೋಗಾಲಯ ಉದ್ಘಾಟನೆ ನಂತರ ತಾಲೂಕಿನ ಮುರುಗಮಲ್ಲದಲ್ಲಿ ಶನಿವಾರ ಮಾನಸಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಯಿಲೆಗಳಲ್ಲಿ ನಾನಾ ಬಗೆ ಇರುವಂತೆ ಮಾನಸಿಕ ಕಾಯಿಲೆಗಳಲ್ಲೂ ಹಲವು ಬಗೆಗಳಿವೆ. ಚಿತ್ತ ಚಾಂಚಲ್ಯ ಮತ್ತು ಬುದ್ಧಿಮಾಂದ್ಯ ಮಕ್ಕಳಲ್ಲಿ ಕಂಡುಬರುವ ನಡವಳಿಕೆ ದೋಷಗಳು ಮತ್ತಿತರ ವಯಸ್ಸಿನ ಕಾಯಿಲೆಗಳಿಗೆ ಸಂಬಂಧಿಸಿದಂತೆ ಈ ಆಸ್ಪತ್ರೆ ಉಪಯುಕ್ತವಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್, ಶಿವಕುಮಾರ್, ಟಿಎಚ್‌ಒ ಡಾ.ರಾಮಚಂದ್ರ ರೆಡ್ಡಿ, ತಾಪಂ ಇಒ ಎಸ್.ಆನಂದ್, ತಹಸೀಲ್ದಾರ್ ಸುದರ್ಶನ್ ಯಾದವ್, ಗ್ರಾಪಂ ಅಧ್ಯಕ್ಷ ಹಾಜಿ ಅನ್ಸರ್ ಖಾನ್, ದರ್ಗಾ ಮೇಲ್ವಿಚಾರಕ ತೊಯ್ಯಬ್ ನವಾಜ್, ದರ್ಗಾ ಕಮಿಟಿ ಕಾರ್ಯದರ್ಶಿ ಆರೀಫ್ ಖಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಗಂಡ್ರಗಾನಹಳ್ಳಿ ಶ್ರೀರಾಮ್ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀ ನಾರಾಯಣರೆಡ್ಡಿ, ತಾಲೂಕು ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ರೆಡ್ಡಿ, ಗುತ್ತಿಗೆದಾರರಾದ ಖಲೀಲ್ ಉಲ್ಲಾ ಖಾನ್ ಇತರರು ಇದ್ದರು.

ಧರ್ಮದ ಜತೆಗೆ ಆರೋಗ್ಯ
ವಿಶೇಷವಾಗಿ ಮಾನಸಿಕ ರೋಗಿಗಳಿಗೆ ದೇವರು ಮತ್ತು ವಿಜ್ಞಾನದ ಜತೆಗೂಡಿ ಆಸ್ಪತ್ರೆ ತೆರೆಯಲಾಗಿದೆ. ಪ್ರಾರ್ಥನೆಯೊಂದಿಗೆ ತಂತ್ರಜ್ಞಾನ ವಿಧಾನ ಬಳಸಿಕೊಳ್ಳಬೇಕು. ಧರ್ಮದ ಜತೆಗೆ ಆರೋಗ್ಯ ಸುಧಾರಿಸುವ ಒಂದು ಹೊಸ ಯೋಜನೆಗೆ ಈ ಆಸ್ಪತ್ರೆ ನಾಂದಿಯಾಗಿದೆ. ರಾಜ್ಯದ ವಿವಿಧೆಡೆ ಇದೇ ಮಾದರಿಯಲ್ಲಿ ಚರ್ಚ್, ದರ್ಗಾ ಹಾಗೂ ದೇವಾಲಯಗಳಲ್ಲಿ ಇಂತಹ ಆರೋಗ್ಯ ಸುಧಾರಿಸುವ ಕಾರ್ಯಕ್ರಮ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net