ಅಂಬಿಗರ ಚೌಡಯ್ಯ ಗಣಾಚಾರ ತತ್ವಕ್ಕೆ ಬದ್ಧ

chn june 22 pandomatti. (1).jpg 01
Published on

ಚನ್ನಗಿರಿ: ಧರ್ಮ, ಸತ್ಯ, ನಿಷ್ಠೆ ಹಾಗೂ ನಿಷ್ಠುರ ನುಡಿಗೆ ಹೆಸರುವಾಸಿಯಾಗಿದ್ದ ಶರಣ ಅಂಬಿಗರ ಚೌಡಯ್ಯ ಗಣಾಚಾರ ತತ್ವಕ್ಕೆ ಬದ್ಧರಾಗಿದ್ದರು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶರಣ ಅಂಬಿಗರ ಚೌಡಯ್ಯನವರ ಸ್ಮರಣೋತ್ಸವ ಹಾಗೂ 872ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.

12ನೇ ಶತಮಾನದ ಶಿವಶರಣರ ಕಾಲಮಾನದಲ್ಲಿ ಸರ್ವಕಾಲಿಕ ಸತ್ಯವನ್ನು ಸಾರಿದ ಶರಣರಲ್ಲಿ ಅಂಬಿಗರ ಚೌಡಯ್ಯ ಮೊದಲಿಗರಾಗಿದ್ದಾರೆ. ಬೇಡವಾದ ಮಾತುಗಳಿಗೆ ಕಡಿವಾಣ ಹಾಕಿದರೆ ಜ್ಯೋತಿರ್ಲಿಂಗವಾಗುತ್ತದೆ. ತಾಯಿಯ ಋಣ, ವಾತ್ಸಲ್ಯ, ಮಮತೆ, ಪ್ರೀತಿ ಹಾಗೂ ಕಾಳಜಿ ದುಡ್ಡು ಕೊಟ್ಟರೆ ಸಿಗುವುದಿಲ್ಲ ಎಂದು ತಿಳಿಸಿದರು.

ಇಂದಿನ ಜನತೆಯಲ್ಲಿ ಎದುರಿಗೆ ಹೊಗಳಿಕೆ, ಮರೆಯಲ್ಲಿ ತೆಗಳಿಕೆ ಇಂದಿನ ತತ್ವವಾಗಿದೆ. ನುಡಿದಂತೆ ನಡೆಯುವುದು ಮರೀಚಿಕೆಯಾಗಿದೆ. ಸಂಬಂಧ, ಸ್ನೇಹ ಯಾವುದು ಲೆಕ್ಕವಿಲ್ಲದಂತೆ ಆಗಿದೆ ಎಂದರು.

ಶಿಕ್ಷಕಿ ಹಾಗೂ ವಾಗ್ಮಿಯಾದ ಚಳ್ಳಕೆರೆಯ ಡಿ.ಶಬ್ರೀನಾ ಮಹಮ್ಮದ್ ಅಲಿ ಮಾತನಾಡಿ, ಶರಣರು ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಹಾಗೂ ಮೃತ್ಯುಚಾರಗಳನ್ನು ಅಳವಡಿಸಿಕೊಂಡು ಸಮಾಜದ ಸಾರವನ್ನು ಸಾರಲು ಸರ್ವಕಾಲಕ್ಕೂ ಶಾಶ್ವತವಾದ ಸತ್ಯವನ್ನು ವಚನದಲ್ಲಿ ಸಾರಿದರು ಎಂದು ಹೇಳಿದರು.

ದೇವರು ನಿರಾಕಾರನಾಗಿದ್ದಾನೆ. ವರ್ಣವಿಲ್ಲದ, ರೂಪವಿಲ್ಲದ ದೇವರನ್ನು ವಿಶ್ವಕ್ಕೆ ಶಿವಲಿಂಗದ ಮೂಲಕ ತೋರಿಸಿಕೊಟ್ಟಿದ್ದಾರೆ. ಮನುಷ್ಯನಲ್ಲಿ ಹಾಗೂ ಪರಿಸರದಲ್ಲಿ ಸಮಾನತೆ ತತ್ವವನ್ನು ನೀಡಿದ್ದಾರೆ. ಭಕ್ತರ ಹಾಗೂ ದೇವರು ನಡುವೆ ಮತ್ತೊಬ್ಬರ ಅವಶ್ಯಕತೆ ಬೇಡ, ಪ್ರತಿ ಕ್ಷಣ ಶುಭ ಘಳಿಗೆಯಾಗಿದೆ. ಸಮಾಜದಲ್ಲಿ ವೈಚಾರಿಕತೆ ಪ್ರಬುದ್ಧತೆ ಸಾಧಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಾವಣಗೆರೆ ಸಮಾಜ ಸೇವಕ ಹಾಗೂ ಮಹಾನಂದಿ ಕನ್​ಸ್ಟ್ರಕ್ಷನ್ಸ್ ಇಂಜಿನಿಯರ್ ಕೆ.ವಿ.ನಾಗರಾಜ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ರಾಜಶೇಖರ್, ಡಾ.ಇಂಚರ, ಶತಾಯುಷಿ ಕಗ್ಗಿ ಮಹಾದೇವಪ್ಪ, ಕೆ.ಜಿ.ಶಿವಮೂರ್ತಪ್ಪ, ಎಂ.ಬಿ.ನಾಗರಾಜ್ ಕಾಕನೂರು, ಟಿ.ವಿ.ಚಂದ್ರಪ್ಪ, ಸುನಿತಾ ರಾಜು, ಸಿದ್ದನಮಠ ಎಸ್.ಆರ್.ಕುಮಾರ್, ಸಿದ್ದೇಶ್ ಹೆಬ್ಬಾಳ್, ದೇಶಾಣಿ ಕಾಂತರಾಜು, ಟಿ.ಎನ್.ಪ್ರಶಾಂತ್, ಮಲಹಾಳ್ ಲಲಿತಮ್ಮ, ಎನ್.ಚಂದ್ರಶೇಖರ್, ತೋಪೇನಹಳ್ಳಿ ಜಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net