

ತುಮಕೂರು: ಜಿಹಾದ್ ಮಾನಸಿಕ ಸ್ಥಿತಿ ಇಡೀ ಜಗತ್ತಿನಲ್ಲಿ ಇದೆ. ವಕ್ಫ ಬೋರ್ಡ್ ಹೆಸರಲ್ಲಿ ದೇಶದಲ್ಲಿ ನಡೆಯುತ್ತಿರುವ ಲ್ಯಾಂಡ್ (ಭೂಮಿ) ಜಿಹಾದ್ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.
ನಗರದಲ್ಲಿ ಹಿಂದುಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಲಾಮಿಕ್ ಜಿಹಾದ್ ಎಲ್ಲೆಡೆ ನಡೀತಿದೆ. ಅದರ ಪ್ರಮುಖಭಾಗ ಲ್ಯಾಂಡ ಜಿಹಾದ್ ಈಗ ಬೆಳಕಿಗೆಬಂದಿದೆ. 10 ಲಕ್ಷ ಎಕರೆ ಜಾಗ ಇವತ್ತು ವಕ್ಫ ಬೋರ್ಡ್ ಮೂಲಕ ಇಸ್ಲಾಂನ ಕೈಸೇರಿದೆ. ಭೂಮಿ ಕಬಳಿಸಿದರೆ ಜಿಹಾದ್ ಮೂಲಕ ಆಳಬಹುದು ಅಂದುಕೊಂಡಿದ್ದು ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಅರಣ್ಯ ಇಲಾಖೆ ಜಾಗ, ಗೋಮಾಳ, ಬೆಟ್ಟಗುಡ್ಡ ಜಾಗವನ್ನು ವಕ್ಫ ಬೋರ್ಡ್ ಹೆಸರಲ್ಲಿ ಕಬಳಿಸಲಾಗಿದೆ. ಹಿಂದುಗಳನ್ನು ಬೆದರಿಸಿ ಒತ್ತಾಯ ಮಾಡಿ ಜಾಗ ಕಬಳಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ತುಮಕೂರಿನಲ್ಲು ಎಲ್ಲಾ ಪಕ್ಷದವರು ದೇವಸ್ಥಾನದ ಜಾಗವನ್ನು ಕಮೀಷನ್ ಆಸೆಗೋಸ್ಕರ ನುಂಗಲು ಹೊರಟಿದ್ದು ಎಲ್ಲರ ಬಂಡವಾಳವನ್ನು ದಾಖಲೆ ಸಮೇತ ಬಯಲು ಮಾಡುತ್ತೇವೆ ಎಂದು ಗುಡುಗಿದರು.
ಬಜರಂಗದಳ ತುಮಕೂರು ವಿಭಾಗದ ಸಂಚಾಲಕ ಮಂಜು ಭಾರ್ಗವ ಮಾತನಾಡಿ, ಈ ಜಾಗದಲ್ಲಿ ಮಾಲ್ ನಿರ್ಮಾಣ ವಿರೋಧಿಸಿ ಹೋರಾಟ ಮಾಡಿದ ಹಿಂದು ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಇಲ್ಲಸಲ್ಲದೆ ಕೇಸು ಹಾಕಿ, ರೌಡಿಶೀಟರ್ ತೆರೆದು ಇನ್ನಿಲ್ಲದ ಕಿರುಕುಳವನ್ನು ನೀಡಲಾಗಿದೆ. ಸಿದ್ದಿವಿನಾಯಕ ಮಾರುಕಟ್ಟೆ ಬಗ್ಗೆ ಬಿಜೆಪಿ ಪಕ್ಷದ ಮುಖಂಡರು, ಶಾಸಕರ ಹೋರಾಟ ಕೇವಲ ನಾಟಕೀಯ. ಈ ಜಾಗದಲ್ಲಿ ನಿರ್ಮಿಸಲು ಹೊರಟಿರುವ ಮಾಲ್ ಯೋಜನೆಯನ್ನು ಸರ್ಕಾರ ಕೈಬಿಡಬೇಕು. ಗಣೇಶ ದೇವಸ್ಥಾನ ಹಾಗೂ ಉದ್ಯಾನವನದ ಜಾಗವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಹಿಂದು ಮಹಾಸಭಾ ಕರ್ನಾಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಧಮೇರ್ಂದ್ರ, ಹಿಂದು ರಾಷ್ಟ್ರ ಸಂಕಲ್ಪ ಸಮಿತಿಯ ರಾಜ್ಯ ಸಂಚಾಲಕ ಮಾರಣ್ಣ ಪಾಳೇಗಾರ್, ಭಾರತೀಯ ಹಿಂದು ಸನಾತನ ಪ್ರತಿಷ್ಠಾನ ಸಂಕಲ್ಪ ಸಮಿತಿಯ ಮುನೇಗೌಡ, ಹಿಂದು ಕನ್ನಡಿಗರ ವೇದಿಕೆ ಹಿಮೇಶ ದೇಸಾಯಿ, ಅಜಾದ್ ಬ್ರಿಗೇಡ್ ನ ರಾಜ್ಯಾಧ್ಯಕ್ಷ ಗಜೇಂದ್ರ ಸಿಂಗ್ ಮತ್ತಿತರರು ಹಾಜರಿದ್ದರು.
ಲ್ಯಾಂಡ್ ಜಿಹಾದ್ಗೆ ಬಿಜೆಪಿ ಶಾಸಕರ ಬೆಂಬಲ!!
ಹತ್ತಾರು ವರ್ಷಗಳಿಂದ ದೇವಾಲಯವಿದ್ದ ಜಾಗ, ನೂರಾರು ತರಕಾರಿ, ಹೂವು, ಹಣ್ಣು ಮಾರಾಟಗಾರಿಗೆ ಆಶ್ರಯವಾಗಿದ್ದ ಸಿದ್ದಿವಿನಾಯಕ ಮಾರುಕಟ್ಟೆ ಜಾಗವನ್ನು ಮಂಗಳೂರಿನ ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ಗೆ ಸೇರಿದ ವ್ಯಕ್ತಿಗಳಿಗೆ ಮಾಲ್ ಕಟ್ಟಲು ಗುತ್ತಿಗೆ ನೀಡುವ ಮೂಲಕ ತುಮಕೂರು ನಗರದಲ್ಲಿ ಲ್ಯಾಂಡ್ ಜಿಹಾದ್ಗೆ ಬಿಜೆಪಿ ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಬಾಂಬ್ ಸಿಡಿಸಿದರು.
ನಗರದ ಹೃದಯ ಭಾಗದಲ್ಲಿರುವ ನೂರಾರು ಕೋಟಿ ಬೆಲೆ ಬಾಳುವ ಜಾಗವನ್ನು ಮುಸ್ಲಿಂ ವ್ಯಕ್ತಿಗಳಿಗೆ ಲೀಸ್ ನೀಡುವ ಮೂಲಕ ಲ್ಯಾಂಡ್ ಜಿಹಾದ್ಗೆ ಇದುವರೆಗೂ ಆಡಳಿತ ನಡೆಸಿರುವ ಎಲ್ಲಾ ಸರ್ಕಾರಗಳು ಬೆಂಬಲಿಸಿವೆ. ಹಿಂದುಗಳಿಗೆ ಸೇರಿದ ಗಣೇಶ ದೇವಾಲಯವಿರುವ ಮೂಲತ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಬರೆದುಕೊಡಲು ಮುಂದಾಗಿವೆ. ಇದಕ್ಕೆ ಶ್ರೀರಾಮಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳ ಒಕ್ಕೂಟ ಎಂದಿಗೂ ಅವಕಾಶ ನೀಡುವುದಿಲ್ಲ.ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಶಾಸಕರು, ಸಚಿವರು ಎಲ್ಲರನ್ನು ಬೆತ್ತಲೆ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.