

ಬೆಂಗಳೂರು: ಕಾಂತರಾಜು ಆಯೋಗ ತಯಾರಿಸಿರುವ ಅವೈಜ್ಞಾನಿಕ ಜಾತಿಗಣತಿ ವರದಿ ವಿರುದ್ಧ ಆರಂಭದಿಂದ ಅಪಸ್ವರ ಎತ್ತಿರುವ ಒಕ್ಕಲಿಗ ಸಮುದಾಯ, ಇದೀಗ ವರದಿ ಅನುಷ್ಠಾನ ಸಂಬಂಧಪಟ್ಟಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ ಇನ್ನಷ್ಟು ಕೆರಳಿದೆ.
ಜಾತಿಗಣತಿ ವರದಿ ಅನುಷ್ಠಾನಗೊಳಿಸುವುದನ್ನು ವಿರೋಧಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲು ಸದ್ಯದಲ್ಲೇ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ, ತುಮಕೂರಿನ ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಉತ್ತರಾಧಿಕಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಸಚಿವರು, ಶಾಸಕರು ಸೇರಿ ಪಕ್ಷತೀತವಾಗಿ ಜನಪ್ರತಿನಿಧಿಗಳ ಸಭೆ ನಡೆಸಲಾಗುವುದು. ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಧಾರಿಸಿ ಮುಂದಿನ ಹೋರಾಟವನ್ನು ನಿರ್ಧರಿಸುವುದಾಗಿ ಸಂಘದ ಅಧ್ಯಕ್ಷ ಬಿ. ಕೆಂಚಪ್ಪಗೌಡ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.
ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಗಾ.ನಂ.ಶ್ರೀಕಂಠಯ್ಯ, ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್, ಎಲ್.ಶ್ರೀನಿವಾಸ್, ಸಹಾಯಕ ಕಾರ್ಯದರ್ಶಿ ಹನುಮಂತರಾಯಪ್ಪ, ಖಜಾಂಚಿ ನಲ್ಲಿಗೆರೆ ಬಾಲು, ನಿರ್ದೇಶಕರಾದ ಎಚ್.ಸಿ. ಜಯಮುತ್ತು, ಹನುಮಂತಯ್ಯ, ಮಾರೇಗೌಡ, ಆಂಜನಪ್ಪ, ಪ್ರಕಾಶ್, ವೆಂಕಟರಾಮೇಗೌಡ, ದೇವರಾಜು, ಡಾ.ನಾರಾಯಣಸ್ವಾಮಿ ಮತ್ತಿತರರಿದ್ದರು.
ಜೊತೆಗೂಡಿ ಹೋರಾಟ:
ರಾಜ್ಯದಲ್ಲಿ ಆಧಾರ್ ಸಂಖ್ಯೆ ಪ್ರಕಾರ ಅಂದಾಜು 7 ಕೋಟಿ ಜನಸಂಖ್ಯೆ ಇದೆ. ಒಂದು ಕೋಟಿ ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಸಮೀಕ್ಷಾ ವರದಿ ನ್ಯೂನತೆಯಿಂದ ಕೂಡಿದೆ.ಸಮೀಕ್ಷೆ ವೇಳೆ ಸಾಕಷ್ಟು ಲೋಪದೋಷಗಳಾಗಿವೆ. ವರದಿ ಅನುಷ್ಠಾನದಿಂದ ಒಕ್ಕಲಿಗ, ಲಿಂಗಾಯತ ಸೇರಿ ಹಲವು ಸಮುದಾಯಗಳಿಗೆ ಅನ್ಯಾಯವಾಗಲಿದೆ. ಸರ್ಕಾರ ವರದಿಯನ್ನು ಅನುಷ್ಠಾನಗೊಳಿಸಲು ಮುಂದಾದರೆ ಲಿಂಗಾಯತ ಸೇರಿ ಇತರೆ ಸಮುದಾಯಗಳ ಜೊತೆಗೂಡಿ ಹೋರಾಟ ನಡೆಸಲಾಗುವುದು. ಕಾನೂನು ಹೋರಾಟ ಸಹ ನಡೆಸುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯರಾಗಿದ್ದ ಕಾಂತರಾಜು ಅವಧಿಯಲ್ಲಿ ಸಿದ್ದಪಡಿಸಲಾಗಿದ್ದ ಈ ವರದಿ ಅವೈಜಾನಿಕ. ವರದಿ ತಯಾರಿಸಿ 9 ವರ್ಷವಾಗಿದೆ. 10 ವರ್ಷಕ್ಕೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕೆಂಬ ನಿಯಮ ಇರುವುದರಿಂದ ಈ ವರದಿ ಅಪ್ರಸ್ತುತ. 9 ವರ್ಷದಲ್ಲಿ ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯ ನೈಜ ಸ್ಥಿತಿಗತಿಯನ್ನು ವರದಿ ಬಿಂಬಿಸುವುದಿಲ್ಲ. ಆದ್ದರಿಂದ, ನಿಖರ ದತ್ತಾಂಶ ಪಡೆದು ಹೊಸದಾಗಿ ಜಾತಿಗಣತಿ ವರದಿ ತಯಾರಿಸುವುದು ಸೂಕ್ತ.
| ಡಾ.ರೇಣುಕಾಪ್ರಸಾದ್, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ.