

ಹಾಸನ: ಭಾರತ ದೇಶದಲ್ಲಿ ಆಂತರಿಕ ದೂರು ಸಮಿತಿಗಳನ್ನು ರಚನೆ ಮಾಡುವುದರಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. 78 ಸಾವಿರಕ್ಕೂ ಹೆಚ್ಚು ಆಂತರಿಕ ದೂರು ಸಮಿತಿಗಳನ್ನು ರಚನೆ ಮಾಡಿದ್ದೇವೆ. ಅವುಗಳ ಕುರಿತಾಗಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ಇರಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಆಗಬೇಕು. ಅವರ ಸಮ್ಮುಖದಲ್ಲಿಯೇ ಕಡ್ಡಾಯವಾಗಿ ವಿಚಾರಣೆ ನಡೆಯಬೇಕು ಎಂದರು.
ಪ್ರತಿ ಕಚೇರಿಗಳಲ್ಲಿ ದೂರು ಪೆಟ್ಟಿಗೆಗಳನ್ನು ಇಡಬೇಕು. ಜಿಲ್ಲೆಯಲ್ಲಿ 315 ಆಂತರಿಕ ದೂರು ಸಮಿತಿಗಳನ್ನು ರಚಿಸಲಾಗಿದೆ. ಇನ್ನು 69 ಬಾಕಿ ಇವೆ. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಆದಂತಹ ಸಂದರ್ಭದಲ್ಲಿ ಆಂತರಿಕ ದೂರು ಸಮಿತಿ ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದರು.
ಕಳೆದ ಮೂರು ದಿನದಿಂದ ಜಿಲ್ಲೆಯ ವಿವಿಧ ಕಾಲೇಜುಗಳಿಗೆ, ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದೇನೆ. ಅರಕಲಗೂಡು ತಾಲೂಕು ಆಸ್ಪತ್ರೆ ಹಾಗೂ ಹಾಸನದ ಜಿಲ್ಲಾ ಆಸ್ಪತ್ರೆಗೂ ಭೇಟಿ ಮಾಡಿದ್ದೇನೆ. ಅಲ್ಲಿ ಕಂಡು ಬಂದಿರುವ ಸಮಸ್ಯೆಗಳ ಕುರಿತಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕೆಲವೊಂದು ಆಸ್ಪತ್ರೆಗಳಲ್ಲಿ ತುರ್ತು ಮಾಡಬೇಕಾದ ಕೆಲಸಗಳನ್ನು ಮಾಡಿ 15 ದಿನಗಳೊಳಗಾಗಿ ಆಯೋಗಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಅರಕಲಗೂಡು ತಾಲೂಕಿನಲ್ಲಿ ಯಾವುದೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಾಗಲಿ, ಪಾಲಿಟೆಕ್ನಿಕ್ ಕಾಲೇಜುಗಳಾಗಲಿ ಇಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೆ ಯಾವ ಕಾಲೇಜುಗಳು ಇಲ್ಲದೆ ಇರುವುದರಿಂದ ಮಕ್ಕಳೆಲ್ಲರೂ ಹಾಸನ ಜಿಲ್ಲೆಗೆ ಆಗಮಿಸಬೇಕು. ಹಾಗಾಗಿ ಬಡ ಮಕ್ಕಳು ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ಕಾಲೇಜುಗಳನ್ನು ತೆರೆಯುವಂತೆ ಮನವಿ ಮಾಡಿದ್ದಾರೆ ಎಂದರು.
ಜನರು ಠಾಣೆಯಲ್ಲಿ ದೂರುಗಳನ್ನು ಸಲ್ಲಿಸಲು ಹೋದಾಗ ಸರಿಯಾಗಿ ಸ್ಪಂದಿಸುವುದಿಲ್ಲ. ಹೆಣ್ಣು ಮಕ್ಕಳಿಗೆ ಗೌರವ ಕೊಡುವುದಿಲ್ಲ, ಎಫ್‌ಐಆರ್ ಮಾಡುವುದಿಲ್ಲ ಎನ್ನುವ ಸಮಸ್ಯೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇಂತಹ ಸಮಸ್ಯೆಗಳು ಕಂಡು ಬಂದಾಗ ಜನರು ಹಿರಿಯ ಪೊಲೀಸ್ ಅಧಿಕಾರಿಯ ಗಮನಕ್ಕೆ ತರಬೇಕು. ಪೊಲೀಸ್ ಠಾಣೆಯಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಅದನ್ನು ಸ್ಕಾೃನ್ ಮಾಡಿ ದೂರು ನೀಡಬೇಕು ಎಂದರು.
ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ಸೂಕ್ಷ್ಮತೆಯಿಂದ ವರ್ತಿಸುವಂತೆ ಯಾವ ಯಾವ ಕಾರ್ಯಕ್ರಮ ಮಾಡಿದ್ದೀರಿ ಎಂದು ವರದಿಯನ್ನು ಕೇಳಿದ್ದೇನೆ. ಇತ್ತೀಚೆಗೆ ಮದುವೆಯಾದ ಎರಡೇ ವಾರಕ್ಕೆ, ನಾಲ್ಕು ತಿಂಗಳಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿರುವಂತಹ ಪ್ರಕರಣಗಳು ಕಂಡುಬರುತ್ತಿವೆ. ಈ ರೀತಿಯ ಕೇಸ್‌ಗಳನ್ನು ದಾಖಲು ಮಾಡಿಕೊಳ್ಳಲು ಪ್ರತ್ಯೇಕ ಮಹಿಳಾ ಡೆಸ್ಕ್ ಇರುತ್ತದೆ. ಅಲ್ಲಿ ಯಾವ ರೀತಿಯಾಗಿ ಅವರನ್ನು ಕೌನ್ಸಿಲಿಂಗ್ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಕೌನ್ಸಿಲಿಂಗ್ ಮಾಡುವುದಕ್ಕೆ ಕೆಲವು ವಿಧಾನಗಳಿವೆ ಆ ವಿಧಾನಗಳ ಕುರಿತಾಗಿ ತಜ್ಞರನ್ನು ಕರೆಸಿ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕೊಡಬೇಕು ಎಂದು ತಿಳಿಸಿದರು.
ಈ ವರ್ಷ ಜಿಲ್ಲೆಯಲ್ಲಿ ಕಾಣೆಯಾಗಿರುವ ಮಹಿಳೆಯರ ಸಂಖ್ಯೆ 279 ಜನ. ಅದರಲ್ಲಿ 236 ಜನರನ್ನು ಕಂಡುಹಿಡಿಯಲಾಗಿದೆ. ಇನ್ನು 43 ಜನರನ್ನು ಪತ್ತೆ ಹಚ್ಚಲಾಗಿಲ್ಲ. ಯಾಕೆ ಪತ್ತೆ ಮಾಡಲು ಆಗಿಲ್ಲ ಎಂಬುದರ ಕುರಿತಾಗಿ ನಮಗೆ ವರದಿಯನ್ನು ನೀಡಿದ್ದಾರೆ. ಅದರ ಕುರಿತಾಗಿ ಪರಿಶೀಲನೆ ಮಾಡಿ ಮತ್ತೆ ವರದಿಯನ್ನು ನೀಡುತ್ತೇನೆ ಎಂದರು.
ವಾಟ್ಸ್‌ಆ್ಯಪ್ ಗ್ರೂಪ್ ರಚನೆ : ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಉತ್ತಮವಾದ ಭಾಂದವ್ಯ ಇರುವುದಕ್ಕೆ ಯಾವೆಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ಕುರಿತು ಕೇಳಿದಾಗ 368 ಬೀಟ್‌ಗಳನ್ನು ಮಾಡಿದ್ದಾರೆ. ಒಂಈ್ಠವರೆ ಲಕ್ಷ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಪೊಲೀಸ್ ಇಲಾಖೆ ಸಾರ್ವಜನಿಕರೊಂದಿಗೆ ರಚನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಯಾವುದೇ ಸಾರ್ವಜನಿಕ ವ್ಯಕ್ತಿಗೆ ಎಲ್ಲಿಯೇ ತೊಂದರೆ ಆದರೂ ಆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಿದರೆ ಅಧಿಕಾರಿಗಳು ಅದರಲ್ಲಿ ಇರುತ್ತಾರೆ ಹಾಗೂ ಅದಕ್ಕೆ ಸ್ಪಂದಿಸುತ್ತಾರೆ. ಈ ರೀತಿಯ ಒಂದು ವ್ಯವಸ್ಥೆ ಪೊಲೀಸ್ ಇಲಾಖೆಯಲ್ಲಿ ಇದೆ ಎಂಬುದರ ಕುರಿತಾಗಿ ಎಲ್ಲರೂ ಮಾಹಿತಿಯನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರು ತಿಳಿದುಕೊಳ್ಳಬೇಕು ಎಂದರು.
ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ತೆರೆದ ಮನೆ ಎಂಬ ಅರಿವು ಕಾರ್ಯಕ್ರಮವನ್ನು ಮಾಡಬೇಕು. ಗಾರ್ಮೆಂಟ್ಸ್, ಮಾರ್ಕೆಟ್‌ಗಳಂತಹ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವಂತಹ ಮಹಿಳೆಯರಿಗೆ ದೌರ್ಜನ್ಯವಾದಾಗ ಎಲ್ಲಿ ಹೋಗಬೇಕು, ಹಾಗಾಗಿ ಅವರು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿ ಇಲ್ಲದೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಮಿತಿ ಇರುತ್ತದೆ ಎಂಬುದರ ಬಗೆಗೆ ಅವರಿಗೆ ಮಾಹಿತಿ ತಿಳಿಸಬೇಕು ಎಂದರು.
ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಮೂರು ತಿಂಗಳಿಗೊಮ್ಮೆ ಮಹಿಳಾ ಗ್ರಾಮ ಸಭೆ ಆಗಬೇಕು. ಇದರ ಕುರಿತಾಗಿಯೂ ವರದಿಯನ್ನು ಕೇಳಿದ್ದೇನೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಕಾವಲು ಸಮಿತಿ ಇರಬೇಕು. ಅದರ ವರದಿಯನ್ನು ಸಹ ಕೇಳಿದ್ದೇನೆ ಎಂದು ತಿಳಿಸಿದರು.
ಜಿಲ್ಲೆಯ ಹಿಮ್ಸ್ ಆಸ್ಪತ್ರೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಒಂದು ಪ್ರಕರಣದ ಕುರಿತು ಕೇಸ್ ದಾಖಲಾಗಿದೆ. ಇದರ ಬಗೆಗೆ ಸಂಬಂಧಪಟ್ಟವರು ಕ್ರಮವಹಿಸಲು ಸೂಚಿಸಲಾಗಿದೆ ಎಂದರು.
ಯಾವುದೇ ದೌರ್ಜನ್ಯ ಅನುಭವಿಸಿ ಬರುವಂತಹ ಹೆಣ್ಣು ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್ ಅವರು ತಕ್ಷಣವೇ ಅವರಿಗೆ ಪೊಲೀಸ್ ಸಹಾಯ, ವೈದ್ಯಕೀಯ ವ್ಯವಸ್ಥೆ, ಉಳಿದುಕೊಳ್ಳುವುದಕ್ಕೆ ಸ್ಥಳವಾಗಿರಬಹುದು ಎಲ್ಲವನ್ನು ಕೂಡ ವ್ಯವಸ್ಥೆ ಮಾಡಿಕೊಡುತ್ತಾರೆ ಎಂದು ತಿಳಿಸಿದರು.